ಬಿಜೆಪಿಯನ್ನು ಜನ ಯಾಕೆ ತಿರಸ್ಕರಿಸಿದರೆಂದರೆ...

Update: 2023-05-22 18:44 GMT

ಮಾನ್ಯರೇ,

ಈಗ ಬಿಜೆಪಿಯ ಸೋಲಿಗೆ ಬಿಜೆಪಿ ಬೆಂಬಲಿಗರು ಯಾರ್ಯಾರನ್ನೂ ದೂರುತ್ತಿದ್ದಾರೆ. ಆದರೆ ಅವರು ಸೋಲನ್ನು ಇನ್ನಾದರೂ ಪರಾಮರ್ಶಿಸಿಕೊಳ್ಳಬೇಕಾಗಿದೆ.
‘ಇತರರಿಗಿಂತ ಭಿನ್ನವಾದ ಪಕ್ಷ’ ಎಂದು ಹೇಳಿಕೊಳ್ಳುವ ಪಕ್ಷ, ನೈತಿಕತೆಯನ್ನು ಬೋಧಿಸುವ ಪಕ್ಷ, ಸಂವಿಧಾನಕ್ಕೆ ಮತ್ತು ನೆಲದ ಕಾನೂನಿಗೆ ಬೆಲೆ ಕೊಡುವುದಾಗಿ ಹೇಳಿಕೊಳ್ಳುವ ಪಕ್ಷ, ಹೇಗಾದರೂ ಮಾಡಿ, ಯಾವ ಮಾರ್ಗವನ್ನಾದರೂ ಹಿಡಿದು ಮುಖ್ಯ ಮಂತ್ರಿಯಾಗಲೇಬೇಕೆಂದು, ಮಕ್ಕಳಂತೆ ರಚ್ಚೆ ಹಿಡಿದು, ಇತರ ಪಕ್ಷಗಳ ಶಾಸಕರನ್ನು ಪಕ್ಷಾಂತರ ಮಾಡಿಸಿ, ಆ ಹುದ್ದೆಗೇರಿದುದನ್ನು ಸಹಿಸಿಕೊಂಡದ್ದನ್ನು ಮತದಾರರು ಮಾತ್ರ ಸಹಿಸಲಿಲ್ಲ! ಬಿಜೆಪಿ ನಾಯಕರು ಬರೀ ಮಾತಿನಲ್ಲೇ ಮನೆ ಕಟ್ಟಲು ಯತ್ನಿಸಿದರು; ವಿರೋಧ ಪಕ್ಷಗಳ ನಾಯಕರ ಮಾತುಗಳಿಗೆ ಕೌಂಟರ್ ಕೊಡುವುದರಲ್ಲಿಯೇ ಕಾಲ ಕಳೆದರು. ಹಾವಭಾವದಿಂದ ತಾವು ಹೇಳುವುದನ್ನೆಲ್ಲಾ ಜನ ನಂಬುತ್ತಿದ್ದಾರೆಂಬ ಭ್ರಮೆ ಅವರನ್ನು ಆವರಿಸಿತ್ತೆನಿಸುತ್ತದೆ. ಪಿಎಸ್ಸೈ ಮುಂತಾದ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಮೇರೆಮೀರಿದ ಭ್ರಷ್ಟಾಚಾರ ನಿರುದ್ಯೋಗಿ ಯುವಕ/ಯುವತಿಯರಲ್ಲಿ ಅಸಹನೆಯನ್ನು ಮಡುಗಟ್ಟಿಸಿತ್ತು, ಅವರು ಭ್ರಮನಿರಸನಗೊಂಡರು. ಶೇ. 40 ಸರಕಾರ ಎಂಬ ಆಪಾದನೆಯಂತೂ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮೊಳಗಿತು. ಪ್ರವಾಹದ ಸಂದರ್ಭದಲ್ಲಿ ತಿರುಗಿನೋಡದ ಕೇಂದ್ರ ನಾಯಕರು, ಚುನಾವಣಾ ಸಂದರ್ಭದಲ್ಲಿ ಹತ್ತಾರು ಬಾರಿ ರಾಜ್ಯದಲ್ಲಿ ಸುತ್ತಿದ್ದು ಮತ ಭಿಕ್ಷೆಗಾಗಿ ಮಾತ್ರ ಎಂದು ಸಹಜವಾಗಿಯೇ ಮತದಾರಿಗನಿಸಿತು; ಅಲ್ಲದೆ, ಹೆಚ್ಚು ಸಂಖ್ಯೆಯಲ್ಲಿರುವ ಭಾಜಪ ಸಂಸದರು, ರಾಜ್ಯಕ್ಕೆ ನ್ಯಾಯುತವಾಗಿ ದೊರಕಬೇಕಾದ ಜಿಎಸ್‌ಟಿ ಮುಂತಾದ ಪರಿಹಾರಗಳನ್ನು ಪಡೆದುಕೊಳ್ಳುವಲ್ಲಿಯೂ ಸೊಲ್ಲೆತ್ತಲಿಲ್ಲ; ತಮ್ಮ ಇರುವಿಕೆಯೇ ಅರಿವಿಲ್ಲದಷ್ಟು ಅವರು ಜನರಿಂದ ದೂರವಿದ್ದು, ಕೇಂದ್ರ ನಾಯಕರನ್ನು ಓಲೈಸುವುದು ಮತ್ತು ಅವರ ಕೃಪಾಕಟಾಕ್ಷದಲ್ಲಿರುವುದೇ ತಮ್ಮ ಪರಮ ಕರ್ತವ್ಯವೆಂದುಕೊಂಡಂತಿದ್ದರು!

ಹಿಂದುತ್ವವೊಂದನ್ನು ಸದಾ ಜಪಿಸುತ್ತಿದ್ದರೆ ತಮಗೆ ಮತ ಗ್ಯಾರಂಟಿ ಎಂಬುದನ್ನು ಜನ ಒಪ್ಪಲಿಲ್ಲ. ಪಕ್ಷಕ್ಕೆ ಇಷ್ಟವಾಗುವ ಹೊಸ ಇತಿಹಾಸವನ್ನು ‘ಸೃಷ್ಟಿಸಿ’ ಪಾಠ್ಯಗಳಲ್ಲಿ ಸೇರಿಸುವ ಯತ್ನಕ್ಕೆ (ನಂಜೇಗೌಡ, ಉರಿಗೌಡ, ಇತ್ಯಾದಿ) ಜನ ಮನ್ನಣೆ ನೀಡಲಿಲ್ಲ. ಭಾಜಪದೊಡನೆ ಒಮ್ಮೆ, ಕಾಂಗ್ರೆಸ್‌ನೊಡನೆ ಎರಡು ಬಾರಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ನ್ನು ‘ಅವಕಾಶವಾದಿ’ ಎಂದು ಪರಿಗಣಿಸಿ, ಅತಂತ್ರ ಸರಕಾರಕ್ಕೆಡೆಗೊಡದೆ, ಒಂದೇ ಪಕ್ಷದ ಸರಕಾರವನ್ನು ಅಧಿಕಾರಕ್ಕೆ ತರಲು ಬಯಸಿದ್ದ ಮತದಾರರು, ಪರ್ಯಾಯವಾಗಿ ಕಾಂಗ್ರೆಸನ್ನು ಆರಿಸಿಕೊಂಡರು; ಜೆಡಿಎಸ್ ಕಳೆದುಕೊಂಡ ಮತಗಳು ಕಾಂಗ್ರೆಸ್ ಬುಟ್ಟಿ ಸೇರಿದವು; ಜೊತೆಗೆ, Anti-incumbency factor ಕೂಡ ಸೇರಿಕೊಂಡಿತು. ಇವು ಭಾಜಪ ಸೋಲಿಗೆ ಸಂಭಾವ್ಯ ಕಾರಣಗಳು; ಇನ್ನೂ ಅನೇಕವಿರಬಹುದು. ಈಗ ಪ್ರಬಲ ಪ್ರತಿಪಕ್ಷವಾಗಿ ಭಾಜಪ ಕಾರ್ಯ ನಿರ್ವಹಿಸಿದರೆ, ರಾಜ್ಯಕ್ಕೆ ಒಳಿತು ಪಕ್ಷಕ್ಕೂ ಒಳಿತು.

Similar News