ದೇಶದ ರಹಸ್ಯ ಮಾರಿಕೊಂಡವನ ಬಗ್ಗೆ ಏಕೆ ಮೌನ?

Update: 2023-05-23 05:47 GMT

ಇತ್ತೀಚೆಗೆ ಪಾಕಿಸ್ತಾನಕ್ಕೆ ದೇಶದ ಸೂಕ್ಷ್ಮ ಮಾಹಿತಿಗಳನ್ನು ಕೊಟ್ಟ ಆರೋಪದ ಮೇಲೆ ಡಿಆರ್ಡಿಒ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಎಂಬವರನ್ನು ಬಂಧಿಸಲಾಯಿತು. ಆದರೆ ಬಂಧನದ ಸುದ್ದಿ ಅಲ್ಲಿ ಇಲ್ಲಿ ಬಂದಿದ್ದು ಬಿಟ್ಟರೆ ಅದರ ಬಗ್ಗೆ ದೊಡ್ಡ ಚರ್ಚೆಯೇ ಆಗಲಿಲ್ಲ. ಇಷ್ಟು ಗಂಭೀರ ಪ್ರಕರಣದ ಬಗ್ಗೆ ಟಿವಿ ವಾಹಿನಿಗಳು ಮಾತನಾಡಲೇ ಇಲ್ಲ. ಪ್ರದೀಪ್ ಕುರುಲ್ಕರ್ ಯಾರು? ಆತನ ಹಿನ್ನೆಲೆ ಏನು? ಆತನ ಹಿಂದಿರುವ ಸೂತ್ರಧಾರಿಗಳು ಯಾರು? ಆತನಿಗೂ ಪಾಕಿಸ್ತಾನದ ಐಎಸ್ಐಗೂ ಏನು ನಂಟು? ಇಂಥ ಯಾವುದೇ ಡಿಬೇಟ್, ಬೊಬ್ಬೆ, ಕಿರುಚಾಟ, ಆರ್ಭಟ ಯಾವುದೂ ಇಲ್ಲ. ಈ ಪ್ರದೀಪ್ ಕುರುಲ್ಕರ್ ಪ್ರಕರಣದ ಬಗ್ಗೆ ‘ದಿ ದೇಶ್ ಭಕ್ತ್’ ಯೂಟ್ಯೂಬ್ ಚಾನೆಲ್ನ ಆಕಾಶ್ ಬ್ಯಾನರ್ಜಿ ಒಂದು ವಿಶ್ಲೇಷಣೆ ಮಾಡಿದ್ದಾರೆ. ಅದರ ಮುಖ್ಯಾಂಶಗಳು ಇಲ್ಲಿವೆ.

ಈ ಗೋದಿ ಮೀಡಿಯಾಗಳು ಯಾರ್ಯಾರಿಗೋ ದೇಶದ್ರೋಹಿ ಪಟ್ಟ ಕಟ್ಟಿ ಕಿರುಚಾಡುತ್ತವೆ. ಇನ್ನಾರಿಗೋ ತುಕ್ಡೆ ತುಕ್ಡೆ ಗ್ಯಾಂಗ್ನ ಮಂದಿಯೆಂದು ಜರೆಯುತ್ತವೆ. ಅರ್ಬನ್ ನಕ್ಸಲರು ಎಂದು ಹಣೆಪಟ್ಟಿ ಕಟ್ಟಿ ಸಿಕ್ಕಾಪಟ್ಟೆ ಹರಿಹಾಯುತ್ತವೆ. ಆದರೆ, ದೇಶಕ್ಕೆ ಮಹಾ ದ್ರೋಹ ಮಾಡಿದ ನಿಜವಾದ ದೇಶದ್ರೋಹಿ ಸಿಕ್ಕಿಬಿದ್ದಾಗ, ಈ ದೇಶದ ಸೂಕ್ಷ್ಮ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಕೊಟ್ಟವನು ಸಿಕ್ಕಿಬಿದ್ದಾಗ ಯಾಕೆ ತುಟಿ ಬಿಚ್ಚದೆ ಬಾಲ ಮುದುರಿಕೊಳ್ಳುತ್ತವೆ? ಈ ದೇಶದ ರಕ್ಷಣಾ ವ್ಯವಸ್ಥೆಯ ಅತ್ಯಂತ ಪ್ರಮುಖ ಮಾಹಿತಿಗಳನ್ನು ಕೇವಲ ಕೆಲವು ನಗ್ನ ಚಿತ್ರಗಳ ಬದಲಿಗೆ ಕೊಟ್ಟುಬಿಡುವವನು ಬಂಧಿತನಾದರೆ ಇಲ್ಲಿನ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಆತನ ಬಗ್ಗೆ, ಆತನ ಹಿನ್ನೆಲೆ, ಮುನ್ನೆಲೆಗಳ ಬಗ್ಗೆ ಯಾವುದೇ ಚರ್ಚೆ ಯಾಕೆ ಆಗುವುದಿಲ್ಲ?

ಸಿಕ್ಕಿಬಿದ್ದಿರುವ ವ್ಯಕ್ತಿಯ ಹೆಸರಿನ ವಿಚಾರದಲ್ಲಿ ನಮ್ಮ ವ್ಯವಸ್ಥೆಗೆ ಯಾವ ತಕರಾರೂ ಇಲ್ಲ ಎಂಬ ಕಾರಣವೇ? ಆತನ ಹೆಸರು ತಮ್ಮ ಬೊಬ್ಬೆ, ಅರಚಾಟಕ್ಕೆ ಅಷ್ಟು ಸೂಕ್ತವಾಗಿ ಹೊಂದುವುದಿಲ್ಲ ಎಂದೇ? ಅಥವಾ ಆತ ಆರೆಸ್ಸೆಸ್ ಹಿನ್ನೆಲೆ ಹೊಂದಿದ್ದಾನೆ ಎಂಬ ಕಾರಣವೇ?ಕೆಲ ದಿನಗಳ ಹಿಂದೆ ಡಿಆರ್ಡಿಒ ಹಿರಿಯ ಅಧಿಕಾರಿ ಹನಿಟ್ರ್ಯಾಪ್ ಗೆ ಬಲಿಯಾಗಿ, ನಗ್ನ ಚಿತ್ರಗಳು ಮತ್ತು ವೀಡಿಯೊ ಕಾಲ್ ಆಮಿಷಕ್ಕೆ ದೇಶದ ರಹಸ್ಯಗಳನ್ನೇ ಮಾರಿಕೊಳ್ಳುವ ಹಂತ ಮುಟ್ಟಿದ್ದ ವಿಚಾರ ಬಯಲಾಗಿದೆ. ಆ ಹಿರಿಯ ವಿಜ್ಞಾನಿಯ ಹೆಸರು ಪ್ರದೀಪ್ ಕುರುಲ್ಕರ್. ದೇಶದ ರಹಸ್ಯವನ್ನೇ ವೈರಿಗಳ ಮಂದಿಟ್ಟ ವ್ಯಕ್ತಿ ಈತ.

ಈ ಪ್ರದೀಪ್ ಕುರುಲ್ಕರ್ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವೆಲಪ್ ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ)ನ ಪುಣೆ ಲ್ಯಾಬ್ನ ನಿರ್ದೇಶಕ. ಯಾರೋ ಕಚೇರಿ ಜವಾನನೋ ಗುಮಾಸ್ತ ನೋ ಅಲ್ಲ. ದೇಶದ ರಕ್ಷಣಾ ವ್ಯವಸ್ಥೆಯ ಮುಖ್ಯ ಭಾಗವಾದ ಡಿಆರ್ಡಿಒ ಒಂದು ವಿಭಾಗದ ಹೊಣೆ ಹೊತ್ತ ಅಧಿಕಾರಿ.

ನಮ್ಮ ದೇಶದ ರಕ್ಷಣೆಗೆ ಸಂಬಂಧಿಸಿರುವ ವಿಚಾರಗಳಲ್ಲಿ, ನಮ್ಮ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಡಿಆರ್ಡಿಒ ಪಾತ್ರ ನಿರ್ಣಾಯಕವಾದದ್ದು. ಅಂಥ ಸಂಸ್ಥೆಯಲ್ಲಿ ಮಹತ್ವದ ಹುದ್ದೆಯಲ್ಲಿದ್ದು ಹಲವಾರು ರಕ್ಷಣಾ ಪ್ರಾಜೆಕ್ಟ್ಗಳಲ್ಲಿ ಭಾಗಿಯಾಗಿರುವ ಹಿರಿಯ ವಿಜ್ಞಾನಿ ಪಾಕಿಸ್ತಾನದ ಗುಪ್ತಚರ ಕಾರ್ಯಾಚರಣೆಯಲ್ಲಿರುವ ಮಹಿಳೆಯೊಬ್ಬರು ಒಡ್ಡುವ ಆಮಿಷಕ್ಕೆ ಬಲಿಯಾಗುವುದೆಂದರೆ ಅದೆಷ್ಟು ಗಂಭೀರ ವಿಷಯ? ಹೇಗೆ ಆ ಅಧಿಕಾರಿ ಆ ಮಹಿಳೆಯ ಮೋಹಕ ಜಾಲದಲ್ಲಿ ಬೀಳುತ್ತಾರೆ? 30 ವರ್ಷಗಳಿಂದ ಡಿಆರ್ಡಿಒನಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಯೊಬ್ಬ ಹನಿಟ್ರ್ಯಾಪ್ಗೆ ಬಲಿಯಾಗುವುದೆಂದರೆ ಅಷ್ಟು ಸರಳವೇ? ಏನಿದರ ಮರ್ಮ?

ಇದೇ ಮೇ 2ರಂದು ಡಿಆರ್ಡಿಒ ಒಂದು ದೂರು ದಾಖಲಿಸುತ್ತದೆ. ಮಾರನೇ ದಿನವೇ ಮಹಾರಾಷ್ಟ್ರ ಎಟಿಎಸ್ ಪ್ರದೀಪ್ ಕುರುಲ್ಕರ್ ಅವರನ್ನು ಬಂಧಿಸುತ್ತದೆ. ಆದರೆ ಕುತೂಹಲಕಾರಿ ವಿಚಾರವೆಂದರೆ ಈ ಕುರುಲ್ಕರ್ ಮೇಲೆ ಗುಪ್ತಚರ ಸಂಸ್ಥೆಗಳು ಕಳೆದ ಕೆಲವು ತಿಂಗಳುಗಳಿಂದಲೂ ಕಣ್ಣಿಟ್ಟಿದ್ದವು ಎಂಬುದು. ಗುಪ್ತಚರ ಏಜನ್ಸಿಗಳು +44 ಕಂಟ್ರಿ ಕೋಡ್ನ ಬ್ರಿಟಿಷ್ ಫೋನ್ ನಂಬರ್ ಒಂದರ ತನಿಖೆಯಲ್ಲಿ ತೊಡಗಿದ್ದವು. ಆ ಸಂಖ್ಯೆ ಕುರುಲ್ಕರ್ ಜೊತೆ ಚಾಟಿಂಗ್ ಮತ್ತು ವೀಡಿಯೊ ಕಾಲ್ನಲ್ಲಿ ತೊಡಗಿದ್ದ ಮಹಿಳೆಗೆ ಸಂಬಂಧಿಸಿದ್ದಾಗಿತ್ತು. ತಾನು ಲಂಡನ್ ಮೂಲದ ಯುವತಿ ಎಂದು ಆಕೆ ಹೇಳಿಕೊಂಡಿದ್ದಳು. ಅದರೆ ಆ ಫೋನ್ ಐಪಿ ಅಡ್ರೆಸ್ ಪಾಕಿಸ್ತಾನದ್ದೆಂಬುದನ್ನು ಗುಪ್ತಚರ ಏಜನ್ಸಿಗಳು ಪತ್ತೆ ಮಾಡಿದ್ದವು. ಭಾರತ ಸರಕಾರ ಫೆಬ್ರವರಿಯಲ್ಲಿ ಪ್ರದೀಪ್ ಕುರುಲ್ಕರ್ ವಿಚಾರಣೆ ಆರಂಭಿಸಿತು. ಕುರುಲ್ಕರ್ ಲ್ಯಾಪ್ಟಾಪ್ ಮತ್ತು ಫೋನ್ಗಳನ್ನು ವಶಪಡಿಸಿಕೊಂಡಾಗ ಸಿಕ್ಕಿದ ವಿವರಗಳು ಇನ್ನೂ ಆಘಾತಕಾರಿಯಾಗಿದ್ದವು.

ಈವರೆಗಿನ ವರದಿಗಳ ಪ್ರಕಾರ, ಈ ಇಡೀ ಕಥೆ ಶುರುವಾದದ್ದು ಕಳೆದ ಜೂನ್-ಜುಲೈ ಸುಮಾರಿಗೆ. ಅಪರಿಚಿತ ಯುವತಿಯಿಂದ ಪ್ರದೀಪ್ ಕುರುಲ್ಕರ್ಗೆ ಮೆಸೇಜ್ ಬಂದಿದ್ದ ಹೊತ್ತು ಅದು. ಲಂಡನ್ನಲ್ಲಿರುವ ಈ ಸುಂದರ ಭಾರತೀಯ ಯುವತಿಗೆ ‘‘ಭಾರತಕ್ಕಾಗಿ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅಪಾರ ಗೌರವ’’ ಎಂದಿತ್ತು ಆ ಮೆಸೇಜ್. ‘‘ನನ್ನ ಹೆಸರು ಝಾರಾ ದಾಸ್ ಗುಪ್ತಾ. ಲಂಡನ್ನಲ್ಲಿ ನೆಲೆಸಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಫಾಲೋ ಮಾಡುತ್ತೇನೆ’’ ಎಂದು ಪರಿಚಯಿಸಿಕೊಂಡಿದ್ದಳು. ಅಷ್ಟಾಗಿದ್ದೇ ತಡ. 59 ವರ್ಷದ ಪ್ರದೀಪ್ ಕುರುಲ್ಕರ್ ಖುಷಿಯಾಗಿ ಹೋಗಿದ್ದರು. ಆ ಯುವತಿಗಾಗಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡುಬಿಟ್ಟಿದ್ದರು. ಬೆತ್ತಲೆ ಚಿತ್ರ ಕಳಿಸುವುದಕ್ಕೂ ಆಕೆಯಲ್ಲಿ ಕೇಳಿಯೇ ಬಿಡುತ್ತಾರೆ.

ತಾನು ಒಬ್ಬಂಟಿತನ ಅನುಭವಿಸುತ್ತಿದ್ದೆ ಎಂಬುದನ್ನು ತಮ್ಮ ಹೇಳಿಕೆಯಲ್ಲೂ ಬಹಿರಂಗಪಡಿಸಿದ್ದಾರೆ ಕುರುಲ್ಕರ್. ಆಕೆ ಪಾಕಿಸ್ತಾನ ದವಳು ಎಂದು ಗೊತ್ತಿರಲಿಲ್ಲ. ಒಬ್ಬಂಟಿತನ ಅನುಭವಿಸುತ್ತಿದ್ದ 59 ವರ್ಷದ ತಾನು ಆಕೆಯೊಂದಿಗೆ ಮಾಹಿತಿ ಹಂಚಿಕೊಂಡೆ. ಅದಕ್ಕೆ ಪ್ರತಿಯಾಗಿ ಆಕೆ ಬೆತ್ತಲೆ ಚಿತ್ರ ಕಳಿಸಿದ್ದುದಾಗಿ ಹೇಳಿದ್ದಾಳೆ. ಹಾಗೆಯೇ ವೀಡಿಯೊ ಕಾಲ್ ಕೂಡ ಆಕೆಯಿಂದ ಬರುತ್ತಿತ್ತು. ಆದರೆ, ಅಷ್ಟಕ್ಕಾಗಿ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ರಹಸ್ಯಗಳನ್ನೇ ಈ ವಿಜ್ಞಾನಿ ಆಕೆಯೆದುರು ತೆರೆದಿಟ್ಟಿದ್ದರೆಂದರೆ ಏನೆನ್ನಬೇಕು?
ಆಕೆಯೊಂದಿಗೆ ಕುರುಲ್ಕರ್ ಏನೇನು ರಹಸ್ಯ ಮಾಹಿತಿ ಹಂಚಿಕೊಂಡಿರಬಹುದು ಎಂದು ನೋಡುವ ಮೊದಲು ಯಾವ್ಯಾವ ರಕ್ಷಣಾ ಪ್ರಾಜೆಕ್ಟ್ಗಳಲ್ಲಿ ಕುರುಲ್ಕರ್ ಪಾತ್ರವಿತ್ತು ಎಂಬುದನ್ನು ನೋಡಬೇಕು. 

ಪರಮಾಣು ಸಾಮರ್ಥ್ಯದ ಅಗ್ನಿ ಕ್ಷಿಪಣಿ ಸರಣಿಗಳು, ಮಿಷನ್ ಶಕ್ತಿ ಮತ್ತು ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಕುರುಲ್ಕರ್ ಬಳಿ ಮಾಹಿತಿಗಳಿದ್ದವು. ಇಂಥ ಅತ್ಯಾಧುನಿಕ ಕ್ಷಿಪಣಿ ಪ್ರಾಜೆಕ್ಟ್ಗಳಲ್ಲಿ ಭಾಗಿಯಾಗಿದ್ದ ಕುರುಲ್ಕರ್ ಬಳಿ ಅದೆಷ್ಟು ಮಹತ್ವದ ಮಾಹಿತಿಗಳಿದ್ದಿರಬಹುದು ಎಂದು ಊಹಿಸಿದರೇ ಆತಂಕವಾಗುತ್ತದೆ.

ಯಾಕೆಂದರೆ ಅಭಿಮಾನಿ ಎಂದು ಹೇಳಿಕೊಂಡು ಸಂಪರ್ಕಕ್ಕೆ ಬಂದು ಆಮಿಷವೊಡ್ಡಿದ ಆ ಯುವತಿ ಇಂಥ ಎಲ್ಲ ರಹಸ್ಯಗಳನ್ನು ಈ ಪ್ರದೀಪ್ ಕುರುಲ್ಕರ್ ಅವರಿಂದ ಕದ್ದಿರಲೇಬೇಕು.


ತನಿಖಾ ಅಧಿಕಾರಿಗಳ ಬಳಿ ಕುರುಲ್ಕರ್ ಬಾಯ್ಬಿಟ್ಟಿರುವ ಪ್ರಕಾರ, ಆಕೆಯೊಂದಿಗೆ ಕುರುಲ್ಕರ್ ಹಂಚಿಕೊಂಡಿರುವ ಮಾಹಿತಿಗಳೆಂದರೆ,
1.ಬ್ರಹ್ಮೋಸ್ ಕ್ಷಿಪಣಿ ಅವುಗಳ ಸಂಖ್ಯೆ ಮತ್ತು ಎಲ್ಲೆಲ್ಲಿ ಅವನ್ನು ಸ್ಥಾಪಿಸಲಾಗಿದೆ ಎಂಬ ವಿವರ.
2.ಭಾರತದ ಒಟ್ಟು ಕ್ಷಿಪಣಿಗಳ ಸಂಖ್ಯೆ, ಅವುಗಳ ತಂತ್ರಜ್ಞಾನ, ಹೇಗೆ ಅವುಗಳನ್ನು ಉನ್ನತೀಕರಿಸಲಾಗಿದೆ ಎಂಬ ವಿವರಗಳು.
3.ಅಗ್ನಿ ಕ್ಷಿಪಣಿ ಮತ್ತು ಉಪಗ್ರಹ ನಿರೋಧಕ ಕ್ಷಿಪಣಿಗಳ ಬಗ್ಗೆ ಮಾಹಿತಿ.
ಈ ಮಾಹಿತಿಗಳನ್ನೆಲ್ಲ ಪಾಕಿಸ್ತಾನಿ ಏಜೆಂಟ್ಗೆ ಸೋರಿಕೆ ಮಾಡುವ ಮಟ್ಟಿಗೆ ಮೈಮರೆಯುವುದು, ಡಿಆರ್ಡಿಒ ಹಿರಿಯ ವಿಜ್ಞಾನಿಯೊಬ್ಬ ಹನಿಟ್ರ್ಯಾಪ್ ಗೆ ಬಲಿಯಾಗುವುದು ಅಷ್ಟು ಸುಲಭವೆ?
ಇದು ಇಂಥ ಮೊದಲ ಘಟನೆಯೂ ಅಲ್ಲ. ಇತ್ತೀಚೆಗೆ ಭಾರತೀಯ ವಾಯುಪಡೆಯ ಅಧಿಕಾರಿ ನಿಖಿಲ್ ಶಿಂಧೆ ಕೂಡ ಇಂಥದೇ ಪ್ರಕರಣದಲ್ಲಿ ಪಾಕ್ ಏಜೆಂಟ್ ಮಹಿಳೆಯೊಬ್ಬಳ ಜೊತೆ ಸಂಪರ್ಕದಲ್ಲಿದ್ದುದು ಬಯಲಾಗಿದೆ. ಎಟಿಎಸ್ ಅಧಿಕಾರಿಗಳು ಶಿಂಧೆ ವಿಚಾರಣೆ ನಡೆಸಿದ್ದಾರೆ.

ಕುರುಲ್ಕರ್ ಅವರನ್ನು ಮೇ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಪ್ರಕರಣದ ವಿವರಗಳು ನಿಜಕ್ಕೂ ಆಘಾತಕಾರಿಯಾಗಿವೆ. ಗುಪ್ತಚರ ಸಂಸ್ಥೆಗಳು ಇನ್ನೂ ದೊಡ್ಡ ಅನಾಹುತವಾಗುವ ಮೊದಲೇ ಎಲ್ಲವನ್ನೂ ಪತ್ತೆ ಮಾಡಿವೆ ಎಂಬುದೇ ಸದ್ಯದ ಸಮಾಧಾನ.

ಹನಿಟ್ರ್ಯಾಪ್ ಐಎಸ್ಐನ ಹಳೇ ತಂತ್ರ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳೂ ಆಗುತ್ತಿವೆ. ಈಗ ಸಿಕ್ಕಿಹಾಕಿಕೊಂಡಿರುವ ಪ್ರದೀಪ್ ಕುರುಲ್ಕರ್ ಇದ್ದ ಪುಣೆ ಕ್ಯಾಂಪಸ್ನಲ್ಲಿಯೂ ಅಂಥದೊಂದು ಜಾಗೃತಿ ಕಾರ್ಯಕ್ರಮ ನಡೆದಿತ್ತು. ಕುರುಲ್ಕರ್ ಕೂಡ ಹಾಜರಾಗಿದ್ದರು. ಅಂಥ ಅಧಿಕಾರಿ, ಅದೂ ನಿರ್ದೇಶಕನ ಹುದ್ದೆಯಲ್ಲಿದ್ದವರು ಯುವತಿಯ ಬಲೆಗೆ ಬಿದ್ದಿದ್ದಾರೆ ಎಂದಾದರೆ ಅದು ಹೇಗೆ? ನಿಜವಾಗಿಯೂ ಆಕೆಯ ಬಲೆಗೆ ಬಿದ್ದರೆ ಅಥವಾ ಅದಕ್ಕಿಂತ ಬೇರೆ ಏನಾದರೂ ಇದೆಯೇ?

ಪರಿಣಿತರು ಹೇಳುವ ಪ್ರಕಾರ, ಈ ಸಲ ಹನಿಟ್ರ್ಯಾಪ್ ವ್ಯೆಹಕ್ಕೆ ಬೀಳಿಸುವಾಗ ಇನ್ನೊಂದು ತಂತ್ರ ಬಳಸಲಾಗಿದೆ. ತಾನು ಭಾರತದ ಅಭಿಮಾನಿ, ಅಖಂಡ ಭಾರತವನ್ನು ಬಯಸುವವಳು, ಭಾರತದ ರಕ್ಷಣೆ, ತಂತ್ರಜ್ಞಾನ ಮತ್ತು ಗುಪ್ತದಳ ವಿಚಾರ ತಿಳಿಯಲು ತುಂಬಾ ಆಸಕ್ತಿ ಎಂದು ಹೇಳಿಕೊಂಡು ಸುಂದರ ಯುವತಿಯರು ಉನ್ನತ ಸ್ಥಾನದಲ್ಲಿರುವವರನ್ನು ಬಲೆಗೆ ಕೆಡಹುವುದು ಈ ತಂತ್ರ. ಭಾರತೀಯ ಗುಪ್ತಚರ ಅಧಿಕಾರಿಗಳು, ಸೇನಾಧಿಕಾರಿಗಳು, ಡಿಆರ್ಡಿಒ ವಿಜ್ಞಾನಿಗಳು, ಉನ್ನತ ರಾಜತಾಂತ್ರಿಕರು ಇಂಥವರೇ ಅವರ ಟಾರ್ಗೆಟ್. ಈಗ ಕುರುಲ್ಕರ್ ಸಂಪರ್ಕಕ್ಕೆ ಬಂದ ಯುವತಿ ಮಾಡಿರುವುದು ಅದನ್ನೇ.

ಆದರೆ ಅಂಥ ಹಿರಿಯ ವಿಜ್ಞಾನಿಗೆ ಅಪರಿಚಿತಳಾದ ಆಕೆ ಇಂಥ ಯಾವುದೋ ಸಂಚಿನ ಭಾಗವಾಗಿರಬಹುದು ಎಂಬ ಅನುಮಾನವೂ ಬರಲಿಲ್ಲವೆ? ವರದಿಗಳ ಪ್ರಕಾರ, ಬೆತ್ತಲೆ ಚಿತ್ರಗಳು ಮತ್ತು ವೀಡಿಯೊ ಕಾಲ್ ವೇಳೆಯೂ ಆಕೆ ತನ್ನ ಮುಖವನ್ನು ತೋರಿಸಿಲ್ಲ. ಆಗಲಾದರೂ ಕುರುಲ್ಕರ್ಗೆ ಅನುಮಾನ ಬರಬೇಕಿತ್ತಲ್ಲವೆ?

ಹನಿಟ್ರ್ಯಾಪ್ ಹೊತ್ತಿನಲ್ಲಿ ಕುರುಲ್ಕರ್ 6 ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಆ ಯುವತಿಯನ್ನು ಲಂಡನ್ನಲ್ಲಿ ಭೇಟಿಯಾಗುವುದಕ್ಕೂ ಅವರು ಪ್ಲ್ಯಾನ್ ಮಾಡಿದ್ದರೆಂಬುದನ್ನು ತನಿಖಾಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಕುರುಲ್ಕರ್ ರಶ್ಯಕ್ಕೆ ಹೋಗಬೇಕಿತ್ತು. ಅಲ್ಲಿಂದ ಲಂಡನ್ಗೆ ಬಂದು ಯುವತಿಯನ್ನು ಭೇಟಿಯಾಗುವುದು ಎಂಬ ಮಾತುಕತೆಯೂ ನಡೆದಿತ್ತು. ಆದರೆ ಆ ಪ್ರವಾಸ ರದ್ದಾಗಿದ್ದರಿಂದ ಆ ಭೇಟಿ ಸಾಧ್ಯವಾಗಿರಲಿಲ್ಲ. 

ಕುರುಲ್ಕರ್ ಅಪರಿಚಿತ ಮಹಿಳೆಯರ ಭೇಟಿಗೆ ಪುಣೆಯಲ್ಲಿನ ಡಿಆರ್ಡಿಒ ಅತಿಥಿ ಗೃಹ ಬಳಸಿದ್ದ ಸಂದರ್ಭಗಳೂ ಇವೆ ಎಂಬುದು ಬಯಲಾಗಿದೆ. ಹಾಗಾದರೆ ಬೇರೆ ದೇಶಗಳಲ್ಲಿ ಈ ಹಿಂದೆ ಈ ರೀತಿ ಯಾರನ್ನಾದರೂ ಭೇಟಿ ಮಾಡಿದ್ದಿರಬಹುದೇ? ಈಗಾಗಲೇ ಅವರು ಭೇಟಿಯಾಗಿರುವ ಅಂಥ ಮಹಿಳೆಯರಲ್ಲಿ ಯಾರಾದರೂ ಇಂಥದೇ ಸಂಚಿನ ಭಾಗವಾಗಿದ್ದವರು ಇದ್ದಿರಬಹುದೆ? ಈ ನಿಟ್ಟಿನಲ್ಲಿಯೂ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಹುಯಿಲೆಬ್ಬಿಸಿ ಗೋದಿ ಮೀಡಿಯಾಗಳು ಉರಿದುಕೊಂಡು ಬೀಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಡಿಆರ್ಡಿಒ ಅಧಿಕಾರಿಯೇ ಪ್ರಮುಖ ಭದ್ರತಾ ಮಾಹಿತಿಗಳನ್ನು ಪಾಕಿಸ್ತಾನದ ಬೇಹು ಇಲಾಖೆಗೆ ಕಳಿಸಿದ್ದಾರೆ. ಹೀಗಿರುವಾಗ ಅದರ ಬಗ್ಗೆ ಏಕೆ ಸುಮ್ಮನಿವೆ? ಆ ಅಧಿಕಾರಿಯ ಹೆಸರು ಗೋದಿ ಮೀಡಿಯಾಗಳು ಅಬ್ಬರಿಸುವುದಕ್ಕೆ ಸೂಕ್ತವಾಗಿಲ್ಲವೆ?

ಇದಲ್ಲದೆ ಇನ್ನೂ ಒಂದು ಅಂಶ ಗೋದಿ ಮೀಡಿಯಾಗಳು ಸುಮ್ಮನಿರಲು ಕಾರಣವಿರಬಹುದು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದ ವೇದಿಕೆಯಲ್ಲೇ ಕುರುಲ್ಕರ್ ಆರೆಸ್ಸೆಸ್ ಉಡುಪಿನಲ್ಲಿ ಭಾಷಣ ಮಾಡಿದ್ದ ವೀಡಿಯೊ ಈಗ ಬಹಿರಂಗವಾಗಿದೆ. ಸಾವರ್ಕರ್ ಡೆತ್ ಆ್ಯನಿವರ್ಸರಿ ಕಾರ್ಯಕ್ರಮದಲ್ಲಿ ಕುರುಲ್ಕರ್ ಮಾತನಾಡಿದ ವೀಡಿಯೊ ಕೂಡ ಇದೆ. ನಾಲ್ಕು ತಲೆಮಾರುಗಳಿಂದ ತಮ್ಮ ಕುಟುಂಬ ಆರೆಸ್ಸೆಸ್ ಜೊತೆ ಸಂಬಂಧ ಹೊಂದಿದ್ದಾಗಿ ಇದೇ ದೇಶದ್ರೋಹಿ ಕುರುಲ್ಕರ್ ಯೂಟ್ಯೂಬ್ ವೀಡಿಯೊವೊಂದರಲ್ಲಿ ಹೇಳಿದ್ದಿದೆ.

14 ವರ್ಷಗಳಿಂದ ಆರೆಸ್ಸೆಸ್ ಶಾಖೆಯಲ್ಲಿ ತಾವು ಸ್ಯಾಕ್ಸೋಫೋನ್ ವಾದಕರಾಗಿರುವ ವಿಚಾರವನ್ನು ಕೂಡ ಆತ ಹೇಳಿಕೊಂಡಿದ್ದಾನೆ. ಆದರೆ ಆರೆಸ್ಸೆಸ್ ಈ ಪ್ರಕರಣದೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದಿದೆ. ಸಂಘಟನೆಯ ಯಾರೋ ಒಬ್ಬರು ತಪ್ಪುಮಾಡಿದ್ದಾರೆಂದಾದರೆ ಇಡೀ ಸಂಘಟನೆಯನ್ನು ದೂರಬಾರದು ಎಂಬುದು ಸರಿ. ಆದರೆ ಕುರುಲ್ಕರ್ ಥರದ ಹಿರಿಯ ಸರಕಾರಿ ಅಧಿಕಾರಿಯೊಬ್ಬ ಹೇಗೆ ತನ್ನ ಕುಟುಂಬ ತಲೆಮಾರುಗಳಿಂದ ಆರೆಸ್ಸೆಸ್ನಂಥ ಯಾವುದಾದರೂ ಸಂಘಟನೆ ಜೊತೆ ಸಂಬಂಧ ಹೊಂದಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾನೆ? ಇದು ಕೇಳಲೇಬೇಕಾಗಿರುವ ಪ್ರಶ್ನೆ. 

ಬಿಜೆಪಿಯಿಂದ ಈವರೆಗೂ ಇದರ ಬಗ್ಗೆ ಪ್ರತಿಕ್ರಿಯೆ ಇಲ್ಲ. ಆದರೆ ಇದೇ ವ್ಯಕ್ತಿ ಕಾಂಗ್ರೆಸ್, ಆಪ್, ಟಿಎಂಸಿ ಇಲ್ಲವೆ ಎಸ್ಪಿ ಜೊತೆ ಸಂಪರ್ಕ ಹೊಂದಿದ್ದಲ್ಲಿ ಬಿಜೆಪಿಯ ಪ್ರತಿಕ್ರಿಯೆ ಎಷ್ಟು ವೇಗವಾಗಿ ಬಂದಿರುತ್ತಿತ್ತು ಎಂಬುದನ್ನು ಊಹಿಸಬಹುದು. ಆಗ ಇದೇ ಗೋದಿ ಮೀಡಿಯಾಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಆಗ ಮಾತ್ರ ಇದು ರಾಷ್ಟ್ರೀಯ ಮಹತ್ವದ, ಚುನಾವಣೆಯ ಅಥವಾ ಸಂಚಿನ ವಿಚಾರವಾಗುತ್ತಿತ್ತೆ?

ಪತ್ರಕರ್ತರು, ನ್ಯಾಯವಾದಿಗಳು, ಹೋರಾಟಗಾರರ ಮೇಲೆ ಪೆಗಾಸಸ್ ಕಣ್ಗಾವಲು ಇಡುವವರು, ಪ್ರದೀಪ್ ಕುರುಲ್ಕರ್ ಥರದ ಅಧಿಕಾರಿಗಳ ಮೇಲೂ ಕಣ್ಣಿಟ್ಟಿದ್ದಿದ್ದರೆ ಈಗ ಇಂಥದೊಂದು ಮುಜುಗರ ಆಗುವ ಸಂದರ್ಭ ಬರುತ್ತಿರಲಿಲ್ಲ. ಇದೇ ಕುರುಲ್ಕರ್ ಎಂಬ ಹೆಸರಿನ ಬದಲಿಗೆ ಬೇರಾವುದೇ ಹೆಸರು ಇದ್ದಿದ್ದರೆ ಇಷ್ಟು ಹೊತ್ತಿಗೆ ಏನೇನೆಲ್ಲಾ ಕೋಲಾಹಲ ಆಗಿರುತ್ತಿತ್ತು? ಆ ಅಧಿಕಾರಿ ಸಂಪರ್ಕ ಹೊಂದಿರುವ ಪಕ್ಷ ಅಥವಾ ಸಂಘಟನೆ ಆರೆಸ್ಸೆಸ್ ಅಲ್ಲದೆ ಬೇರೆಯಾಗಿದ್ದರೆ ಏನಾಗಿರುತ್ತಿತ್ತು?

ಆದರೆ ಹೆಸರಿನ ಬಗ್ಗೆ, ಆತ ಹೊಂದಿರುವ ರಾಜಕೀಯ ಸಂಪರ್ಕದ ಬಗ್ಗೆ ವ್ಯವಸ್ಥೆಗೆ ಯಾವ ತಕರಾರೂ ಇಲ್ಲವೆಂದಾದರೆ ಆತ ಏನು ಬೇಕಾದರೂ ಮಾಡಬಹುದು. ಆತ ಪಾಕಿಸ್ತಾನಕ್ಕೆ ಈ ದೇಶದ ರಹಸ್ಯ ಮಾಹಿತಿಯನ್ನೂ ಕಳಿಸಬಹುದು ಎಂದಾಯಿತಲ್ಲವೆ?
ಪ್ರಶ್ನಿಸಲೇಬೇಕಾದ್ದನ್ನು ಪ್ರಶ್ನಿಸದ, ಚರ್ಚಿಸಲೇಬೇಕಾದ್ದನ್ನು ಚರ್ಚಿಸದ, ಹೇಳಲೇಬೇಕಾದ್ದನ್ನು ಹೇಳದ ಮಾಧ್ಯಮಗಳ ಈ ಮೌನವೇ ಅತ್ಯಂತ ಅಸಹನೀಯ. ವ್ಯಕ್ತಿಯ ಧರ್ಮ, ಹೆಸರು, ಆತನ ಸಂಪರ್ಕ ನೋಡಿ ಸುದ್ದಿ ಮಾಡುವುದು, ಪ್ರಶ್ನಿಸುವುದು, ಅಥವಾ ಸುದ್ದಿ ಮಾಡದೇ ಇರುವುದು, ಪ್ರಶ್ನಿಸದೆ ಇರುವುದು ಇವು ಈ ದೇಶಕ್ಕೆ ಅತ್ಯಂತ ಅಪಾಯಕಾರಿ.

ನಮ್ಮ ದೇಶದ ರಕ್ಷಣೆಗೆ ಸಂಬಂಧಿಸಿರುವ ವಿಚಾರಗಳಲ್ಲಿ, ನಮ್ಮ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಡಿಆರ್ಡಿಒ ಪಾತ್ರ ನಿರ್ಣಾಯಕವಾದದ್ದು. ಅಂಥ ಸಂಸ್ಥೆಯಲ್ಲಿ ಮಹತ್ವದ ಹುದ್ದೆಯಲ್ಲಿದ್ದು ಹಲವಾರು ರಕ್ಷಣಾ ಪ್ರಾಜೆಕ್ಟ್ ಗಳಲ್ಲಿ ಭಾಗಿಯಾಗಿರುವ ಹಿರಿಯ ವಿಜ್ಞಾನಿ ಪಾಕಿಸ್ತಾನದ ಗುಪ್ತಚರ ಕಾರ್ಯಾಚರಣೆಯಲ್ಲಿರುವ ಮಹಿಳೆಯೊಬ್ಬರು ಒಡ್ಡುವ ಆಮಿಷಕ್ಕೆ ಬಲಿಯಾಗುವುದೆಂದರೆ ಅದೆಷ್ಟು ಗಂಭೀರ ವಿಷಯ? ಹೇಗೆ ಆ ಅಧಿಕಾರಿ ಆ ಮಹಿಳೆಯ ಮೋಹಕ ಜಾಲದಲ್ಲಿ ಬೀಳುತ್ತಾರೆ? 30 ವರ್ಷಗಳಿಂದ ಡಿಆರ್ಡಿಒನಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಯೊಬ್ಬ ಹನಿಟ್ರ್ಯಾಪ್ಗೆ ಬಲಿಯಾಗುವುದೆಂದರೆ ಅಷ್ಟು ಸರಳವೇ? ಏನಿದರ ಮರ್ಮ?

Similar News