​ಇನ್ನೂ ಬಗೆಹರಿಯದ ಖಾಸಗಿ ಹಜ್ ಯಾತ್ರಿಕರ, ನಿರ್ವಹಕರ ಗೊಂದಲ

Update: 2023-05-23 16:00 GMT

ಬೆಂಗಳೂರು, ಮೇ 23: ಹಜ್ ಯಾತ್ರೆ ಸಂಬಂಧ ಈಗಾಗಲೇ ವಿಮಾನದ ಮುಂಗಡ ಟಿಕೆಟ್ ಕಾದಿರಿಸಲಾಗಿದೆ. ಯಾತ್ರಾರ್ಥಿಗಳು ಉಳಿಯಲು ಹೊಟೇಲ್ ಬುಕ್ ಮಾಡಲು ಸೌದಿಯಿಂದ ಒತ್ತಡಗಳು ಬರುತ್ತಿವೆ. ಮೊದಲ ತಂಡ ಹೊರಡಲು ಇನ್ನು ಎರಡೇ ದಿನಗಳು ಬಾಕಿ ಉಳಿದಿವೆ. ಆದರೂ ಖಾಸಗಿ ಹಜ್ ಟೂರ್ ನಿರ್ವಹಕರ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಖಾಸಗಿ ಯವರಿಗೆ ಹಜ್ ವೀಸಾ ಕೋಟಾ ವಿತರಣೆ ಕುರಿತ ಗೊಂದಲ ಇನ್ನೂ ಮುಂದುವರೆದಿದೆ.

ಬದಲಾದ ನಿಯಮದಂತೆ ಈ ವರ್ಷ ಸರಕಾರ ಮತ್ತು ಖಾಸಗಿಯವರಿಗೆ ವೀಸಾ ಹಂಚಿಕೆಯಲ್ಲಿದ್ದ ಕೋಟಾವನ್ನು  ಶೇಕಡಾ 30ರಿಂದ 20ಕ್ಕೆ ಇಳಿಸಲಾಗಿತ್ತು. ಆದರೆ ಖಾಸಗಿಯವರಿಗೆ ನಿಗದಿ ಪಡಿಸಲಾದ ಶೇ.20ರ ಕೋಟಾ ಇನ್ನೂ ಕೂಡ ಸಮರ್ಪಕವಾಗಿ ವಿತರಣೆಯಾಗದೆ ಗೊಂದಲಮಯ ವಾತಾವರಣ ನಿರ್ಮಾಣ ವಾಗಿದೆ.

ಸರಕಾರದ ಬಳಿ ಖಾಸಗಿಯವರ ಇನ್ನೂ 5000 ಕೋಟಾ ಉಳಿದಿದ್ದು, ಅದನ್ನು ಯಾರಿಗೆ ಕೊಡುತ್ತಾರೆ, ಯಾವಾಗ ಕೊಡುತ್ತಾರೆ ಎಂಬ ಬಗ್ಗೆ ಯಾವುದೂ ನಿಶ್ಚಿತತೆ ಇಲ್ಲ. ಹಜ್‌ಗೆ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು ಎಲ್ಲಾ ನಿರ್ವಾಹಕರು ತೀರಾ ಚಿಂತಿತರಾಗಿದ್ದಾರೆ. ಪವಿತ್ರ ಹಜ್ ಯಾತ್ರೆಗೆ ಈ ರೀತಿಯ ಸಮಸ್ಯೆ ಎದುರಾಗಿರುವುದು ಇದೇ ಮೊದಲು ಎಂಬುದು ನಿವಾರ್ಹಕರ ಆರೋಪ.

ಇನ್ನೂ ತೆರೆಯದ ಪೋರ್ಟಲ್

ಹಜ್ ಯಾತ್ರೆ ಸಂಬಂಧ ಹೊಟೇಲ್ ನೋಂದಾವಣಿ ಸೇರಿದಂತೆ ಎಲ್ಲದಕ್ಕೂ ಅತೀ ಅಗತ್ಯವಾಗಿರುವ ಇ ಹಜ್ ಪೋರ್ಟಲ್ ಇನ್ನೂ ತೆರೆದಿಲ್ಲ. ಇದರಿಂದ ಖಾಸಗಿ ಹಜ್ ಟೂರ್ ನಿರ್ವಹಕರು ಎಲ್ಲದಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ನಿಯಮದಂತೆ ಭಾರತ ಸರ್ಕಾರ ಪೂರ್ಣ ಕೋಟಾ ವಿತರಣೆ ನಂತರ ಯಾವ ಸಂಸ್ಥೆಗೆ ಎಷ್ಟು ಕೋಟಾ ಕೊಡಲಾಗಿದೆ ಎಂಬ ಮಾಹಿತಿಯನ್ನು ಸೌದಿ ಅರೇಬಿಯಾ ಸರ್ಕಾರಕ್ಕೆ ಕೊಡಬೇಕು. ಆ ನಂತರ ಸೌದಿ ಅರೇಬಿಯಾ ಈ ಹಜ್ ಪೋರ್ಟಲ್ ತೆರೆಯಲು ಸಾಧ್ಯ.

ಹಾಗಾಗಿ ಈಗಾಗಲೇ ಕೋಟಾ ಪಡೆದುಕೊಂಡ ಖಾಸಗಿ ನಿರ್ವಾಹಕರು ಹಜ್ ಯಾತ್ರೆ ಸಂಬಂಧ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಹಜ್ ಪೋರ್ಟಲ್ ತೆರೆಯದೆ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದಾರೆ. ಪೋರ್ಟಲ್ ತೆರೆಯದೆ ಹಜ್ ಯಾತ್ರಾರ್ಥಿಗಳು ಸೌದಿ ಅರೇಬಿಯಾದಲ್ಲಿ ಉಳಿದುಕೊಳ್ಳುವ ಹೊಟೇಲ್‌ಗಳ ಹಣ ಪಾವತಿಸಲು ಸಾಧ್ಯವಾಗು ತ್ತಿಲ್ಲ. ಹಜ್ ನ ದಿನಗಳು ಸಮೀಪಿಸುತ್ತಿರುದ ರಿಂದ ಇದೀಗ ಸೌದಿ ಹೊಟೇಲಿನವರು  ಹಣ ಪಾವತಿಸುವಂತೆ ನಿರ್ವಾಹಕರಿಗೆ ಒತ್ತಡ ಹಾಕುತ್ತಿದ್ದಾರೆ.

ಪ್ರಯೋಜನಕ್ಕೆ ಬಾರದ ಕೋಟಾ

ಕೆಲವರಿಗೆ ಕೋಟಾ ವಿತರಣೆಯಾಗಿದ್ದರೂ ಪೋರ್ಟಲ್ ಓಪನ್ ಆಗದೆ ಯಾವುದೇ ರೀತಿಯಲ್ಲೂ ಮುಂದುವರೆಯು ವಂತಿಲ್ಲ. ಹೀಗಾಗಿ ಸರಕಾರ ಖಾಸಗಿಯವರಿಗೆ ನೀಡಿದ ಕೋಟಾ ಇನ್ನೂ ಪ್ರಯೋಜನಕ್ಕೆ ಬಂದಿಲ್ಲ.

ಖಾಸಗಿಯವರಿಗೆ ಕೋಟಾವನ್ನು ಸಂಪೂರ್ಣ ವಿತರಣೆ ಮಾಡದೆ ಹಜ್ ಪೋರ್ಟಲ್ ತೆರೆಯುವುದಿಲ್ಲ. ಇದರಿಂದ ಖಾಸಗಿ ಹಜ್ ಟೂರ್ ನಿರ್ವಹಕರು ಅಡ್ಡ ಕತ್ತರಿಯಲ್ಲಿ ಸಿಲುಕಿದಂತಾಗಿದೆ. ಅದೇ ರೀತಿ ಕೋಟಾ ಬಿಡುಗಡೆಯಲ್ಲಿ ಸರಿಯಾದ ಸ್ಪಷ್ಟತೆ ಇಲ್ಲದ ಕಾರಣ ಫ್ಲೈಟ್ ಬುಕಿಂಗ್‌ನಲ್ಲೂ ಗೊಂದಲ ಉಂಟಾಗಿದೆ. ನಿರ್ವಹಕರು ಖಾಸಗಿಯಾಗಿ ಎಷ್ಟು ಮಂದಿಯನ್ನು ಹಜ್ ಯಾತ್ರೆಗೆ ಕರೆದು ಕೊಂಡು ಹೋಗಬೇಕೆಂಬುದನ್ನು ಇನ್ನು ಕೂಡ ನಿರ್ಧರಿಸಲು ಸಾಧ್ಯ ಇಲ್ಲವಾಗಿದೆ.

ಸರಕಾರದಿಂದ ಅವ್ಯವಸ್ಥೆ

ಪ್ರತಿವರ್ಷ ಯಾತ್ರಾರ್ಥಿಗಳು ಎರಡು ತಂಡವಾಗಿ ಹಜ್‌ಗೆ ಹೋಗುತಾತಿರೆ. ಒಂದು ತಂಡ ಬೇಗ ಹೋಗಿ ಹಜ್ ಮುಗಿದ ಕೂಡಲೇ ವಾಪಾಸು ಬಂದರೆ, ಇನ್ನೊಂದು ತಂಡ ತಡವಾಗಿ ಹೋಗಿ ಹಜ್ ಆಗಿ 10-15ದಿನಗಳ ನಂತರ ವಾಪಾಸ್ಸು ಬರುತ್ತದೆ.

ಇದೀಗ ಈ ಎಲ್ಲ ಗೊಂದಲದಿಂದಾಗಿ ಬೇಗ ಹೊರಡುವ ತಂಡದವರು ಈಗಾಗಲೇ ಫ್ಲೈಟ್ ಟಿಕೆಟ್ ಖಾದಿರಿಸಿರು ದರಿಂದ ತಮ್ಮ ವಿಮಾನ ತಪ್ಪಿಸಿ ಕೊಳ್ಳುವ ಮತ್ತು ಮುಂಗಡ ಪಾವತಿಸಿರುವವರು ಅದನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮೊದಲು ಹೋಗುವ ತಂಡದ ಹೆಚ್ಚಿನವರಿಗೆ ಮೇ 27 ರ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿದೆ. ಇನ್ನೆರಡು ದಿನವಷ್ಟೇ ಉಳಿದಿದೆ. ಹಜ್ ಪೋರ್ಟಲ್ ತೆರೆಯದೆ ಇವರಿಗೂ ಹಜ್ ಯಾತ್ರೆಗೆ ಹೋಗಲು ಆಗುತ್ತಿಲ್ಲ.

ಒಟ್ಟಾರೆಯಾಗಿ ಸರಕಾರದ ಅವ್ಯವಸ್ಥೆಯಿಂದಾಗಿ ಖಾಸಗಿ ಹಜ್ ನಿರ್ವಹಕರು ಮತ್ತು ಹಜ್ ಯಾತ್ರಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ಉಂಟಾಗಿದೆ.

Similar News