×
Ad

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕಾರ: ಕಾಂಗ್ರೆಸ್‌ಗೆ ಬೆಂಬಲ

Update: 2023-05-24 07:44 IST

ಹೊಸದಿಲ್ಲಿ: ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದನ್ನು ವಿರೋಧ ಪಕ್ಷಗಳು ಬಹಿಷ್ಕರಿಸುವಂತೆ ಕಾಂಗ್ರೆಸ್ ನೀಡಿರುವ ಕರೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಬಿಜೆಪಿಯೇತರ ಪಕ್ಷಗಳನ್ನು ಸಂಪರ್ಕಿಸಲಾಗಿದ್ದು, ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಕಾರ್ಯಕ್ರಮದಿಂದ ಹೊರಗಿಟ್ಟಿರುವುದನ್ನು ವಿರೋಧಿಸುವ ನಿಲುವನ್ನು ಈ ಪಕ್ಷಗಳೂ ಬೆಂಬಲಿಸಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ಸ್ಪಂದನೆ ಸಿಕ್ಕಿರುವ ಬಗ್ಗೆ ಕಾಂಗ್ರೆಸ್ ಸಮಾಧಾನ ವ್ಯಕ್ತಪಡಿಸಿದೆ. ಕಾರ್ಯಕ್ರಮ ಬಹಿಷ್ಕರಿಸುವ ನೀರ್ಧಾರವನ್ನು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಅದರ ಮಿತ್ರಪಕ್ಷವಾಗಿರುವ ಜೆಡಿಯು, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ನ ನಿರ್ಧಾರದಿಂದ ಪ್ರಭಾವಿತವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಂಸತ್‌ನ ನೂತನ ಕಟ್ಟಡವನ್ನು ರಾಷ್ಟ್ರಪತಿಗಳು ಉದ್ಘಾಟಿಸದೇ ಇರುವುದು ನಮಗೆ ಆಘಾತ ತಂದಿದೆ ಎಂದು ಆಮ್ ಆದ್ಮಿ ಪಾರ್ಟಿ ಪ್ರತಿಕ್ರಿಯಿಸಿದೆ. ಹಲವು ಇತರ ವಿರೋಧ ಪಕ್ಷಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನಾವು ಕೂಡಾ ಸಮಾರಂಭ ಬಹಿಷ್ಕರಿಸುತ್ತೇವೆ ಎಂದು ಪಕ್ಷ ಹೇಳಿದೆ.

ಕಾಂಗ್ರೆಸ್ ಪಕ್ಷದ ಮಿತ್ರಪಕ್ಷವಲ್ಲದಿದ್ದರೂ, ಇದೇ ನಿಲುವನ್ನು ತೃಣಮೂಲ ಕಾಂಗ್ರೆಸ್ ಕೂಡಾ ವ್ಯಕ್ತಪಡಿಸಿದೆ. ಕಾರ್ಯಕ್ರಮ ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಪ್ರಕಟಿಸುವುದನ್ನು ವಿಳಂಬ ಮಡಿದ್ದರೂ, ಅತಿದೊಡ್ಡ ವಿರೋಧ ಪಕ್ಷದ ಹಾದಿಯಲ್ಲಿ ಮುನ್ನಡೆಯುವ ಸುಳಿವು ನೀಡಿದೆ.

ಈ ಮೂಲಕ ಕಾಂಗ್ರೆಸ್‌ನ ಬಹಿಷ್ಕಾರ ಕರೆಗೆ ದೊಡ್ಡ ಪ್ರಮಾಣದ ಬೆಂಬಲ ಸಿಕ್ಕಂತಾಗಿದೆ. ಆದರೆ ಬಿಎಸ್ಪಿ, ಎಸ್ಪಿ ಹಾಗೂ ಬಿಆರ್‌ಎಸ್ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

Similar News