ಐಪಿಎಲ್: ಸಮಯ ಕಳೆಯಲು ಅಂಪೈರ್ ಜೊತೆ ಧೋನಿ ಮಾತಿನ ಚಕಮಕಿ!

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2023-05-24 08:54 GMT

ಚೆನ್ನೈ, ಮೇ 24: ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10ನೇ ಬಾರಿ ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ಧೋನಿ ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಮಯ ಕಳೆಯಲು ಅಂಪೈರ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆನ್ನಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಧೋನಿ ಎಂದಿನಂತೆ ಆನ್ ಫೀಲ್ಡ್ ಅಂಪೈರ್ ನಿರ್ಧಾರಗಳ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಒಂದು ಹಂತದಲ್ಲಿ ಅಂಪೈರ್ ಜೊತೆ ನಡೆದುಕೊಂಡ ರೀತಿ ಭಾರತದ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಹಾಗೂ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಗುಜರಾತ್ ರನ್ ಚೇಸಿಂಗ್ ನ 15ನೇ ಓವರ್ ಗೆ ಮುನ್ನ ಈ ಘಟನೆ ನಡೆದಿದೆ. ಧೋನಿ ಯಾವುದೋ ವಿಚಾರಕ್ಕೆ ಅಂಪೈರ್ ರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂತು. ಆರಂಭದಲ್ಲಿ ಯಾವ ವಿಷಯ ಎಂಬುದು ಗೊತ್ತಾಗಲಿಲ್ಲ. ಆ ನಂತರ ಧೋನಿ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ತಂತ್ರ ಮಾಡಿದ್ದರು ಎಂಬುದನ್ನು ಅನೇಕರು ಗಮನಿಸಿದ್ದರು.

9 ನಿಮಿಷಕ್ಕೂ ಹೆಚ್ಚು ಸಮಯ ಮೈದಾನದ ಹೊರಗಿದ್ದ ವೇಗಿ ಮಥೀಶಾ ಪತಿರನ ಮೈದಾನದ ಒಳ ಪ್ರವೇಶಿಸುತ್ತಿದ್ದಂತೆ  ಧೋನಿ ಅವರಿಂದ ಬೌಲಿಂಗ್ ಮಾಡಿಸಲು ಮುಂದಾಗಿದ್ದರು. ಪತಿರನ ಮೈದಾನದಿಂದ ಹೊರಗಿದ್ದಷ್ಟೇ ಸಮಯ ಮೈದಾನದ ಒಳಗೆ ಇಲ್ಲದ ಕಾರಣ ಅಂಪೈರ್ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ನಿಯಮದ ಪ್ರಕಾರ ತನ್ನ ಓವರ್ ಎಸೆಯಲು ಪತಿರನ ಮೈದಾನದಲ್ಲಿ ಕನಿಷ್ಠ 9 ನಿಮಿಷ ಇರಬೇಕಾಗುತ್ತದೆ. ಇದರಿಂದ ವಿಚಲಿತರಾದ ನಾಯಕ ಧೋನಿ ಅಂಪೈರ್ ಜೊತೆ ತಮ್ಮ ತಂಡದ ಇತರ ಆಟಗಾರರನ್ನು ಸೇರಿಸಿಕೊಂಡು ಪತಿರನಗೆ ಬೌಲಿಂಗ್ ಗೆ ಅವಕಾಶ ಸಿಗುವ ತನಕವೂ ಜಾಣತನದಿಂದ 4 ನಿಮಿಷ ಮಾತುಕತೆ ನಡೆಸಿದ್ದರು.  

ಅಂಪೈರ್ ರೊಂದಿಗೆ ಧೋನಿ ಟೈಂ ಪಾಸ್ ಮಾಡಿದ ರೀತಿಗೆ ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದರು.

Similar News