×
Ad

ಉದ್ಧವ್ ಠಾಕ್ರೆ ಬೆಂಬಲದ ಭರವಸೆ ನೀಡಿದ್ದಾರೆ:ಅರವಿಂದ್ ಕೇಜ್ರಿವಾಲ್

Update: 2023-05-24 22:18 IST

ಮುಂಬೈ,ಮೇ 24: ದಿಲ್ಲಿಯ ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಳನ್ನು ನಿಯಂತ್ರಿಸುವ ಕೇಂದ್ರ ಸರಕಾರದ ವಿಶೇಷ ಆದೇಶವನ್ನು ತಡೆಗಟ್ಟಲು ಆಪ್ಗೆ ನೆರವಾಗುವುದಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಭರವಸೆ ನೀಡಿದ್ದಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ತಿಳಿಸಿದರು.

ಉಭಯ ನಾಯಕರು ಠಾಕ್ರೆಯವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್,ಆಪ್ನ ರಾಜ್ಯಸಭಾ ಸದಸ್ಯರಾದ ಸಂಜಯ ಸಿಂಗ್ ಮತ್ತು ರಾಘವ ಛಡ್ಡಾ ಹಾಗೂ ದಿಲ್ಲಿ ಸಚಿವೆ ಅತಿಷಿ ಕೇಜ್ರಿವಾಲ್ ಜೊತೆಯಲ್ಲಿದ್ದರು.

‘ಸಂಸತ್ತಿನಲ್ಲಿ ನಮ್ಮನ್ನು ಬೆಂಬಲಿಸುವುದಾಗಿ ಠಾಕ್ರೆ ನಮಗೆ ಭರವಸೆ ನೀಡಿದ್ದಾರೆ. ಸುಗ್ರೀವಾಜ್ಞೆಯ ಬದಲು ಮಂಡಿಸಲಾಗುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಳ್ಳದಿದ್ದರೆ 2024ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಮರಳುವುದಿಲ್ಲ ’ ಎಂದು ಕೇಜ್ರಿವಾಲ್ ಹೇಳಿದರು.
‘ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಂದಾಗಿದ್ದೇವೆ. ನಮ್ಮನ್ನು ‘ಪ್ರತಿಪಕ್ಷಗಳು ’ಎಂದು ಕರೆಯಬಾರದು,ವಾಸ್ತವದಲ್ಲಿ ಅವರು (ಕೇಂದ್ರ) ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧವಾಗಿರುವುದರಿಂದ ಅವರನ್ನು ‘ಪ್ರತಿಪಕ್ಷ’ ಎಂದು ಕರೆಯಬೇಕು ಎಂದು ನಾನು ಭಾವಿಸಿದ್ದೇನೆ ’ ಎಂದು ಠಾಕ್ರೆ ನುಡಿದರು.

ದಿಲ್ಲಿಯ ಅಧಿಕಾರಶಾಹಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಆಪ್ನ ಹೋರಾಟಕ್ಕೆ ಬೆಂಬಲವನ್ನು ಕ್ರೋಡೀಕರಿಸಲು ದೇಶವ್ಯಾಪಿ ಪ್ರವಾಸವನ್ನು ಕೈಗೊಂಡಿರುವ ಕೇಜ್ರಿವಾಲ್ ಮತ್ತು ಮಾನ್ ಮಂಗಳವಾರ ಕೋಲ್ಕತಾದಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಬೆಂಬಲದ ಭರವಸೆಯನ್ನು ಪಡೆದುಕೊಂಡಿದ್ದರು.

ಕೇಂದ್ರವು ಶುಕ್ರವಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಆರು ತಿಂಗಳ ಗಡುವಿದ್ದು,ಅಷ್ಟರೊಳಗೆ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಳ್ಳಬೇಕಿದೆ.

Similar News