ಉತ್ತರಪ್ರದೇಶ: ಅರ್ಚಕನ ಥಳಿಸಿ ಹತ್ಯೆ
Update: 2023-05-24 22:56 IST
ಲಕ್ನೊ, ಮೇ 24: ಅಪರಿಚಿತ ದುಷ್ಕರ್ಮಿಗಳು ಅರ್ಚಕರೋರ್ವರನ್ನು ಕೈಕಾಲು ಕಟ್ಟಿ, ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಮೃತಪಟ್ಟ ಅರ್ಚಕನನ್ನು ಹರಿದಾಸ್ ಮಹಾರಾಜ್ (75) ಎಂದು ಗುರುತಿಸಲಾಗಿದೆ.
ಅಪರಿಚಿತ ದುಷ್ಕರ್ಮಿಗಳು ಹರಿದಾಸ್ ಮಹಾರಾಜ್ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ, ಅವರ ಕೈ ಕಾಲುಗಳನ್ನು ಕಟ್ಟಿದ್ದಾರೆ. ಅವರ ತಲೆಗೆ ಇಟ್ಟಿಗೆ ಎತ್ತಿ ಹಾಕಿದ್ದಾರೆ. ಇದರ ಪರಿಣಾಮ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೇವಾಲಯದ ಆವರಣದಲ್ಲಿರುವ ಕೊಠಡಿಯಲ್ಲಿ ಹರಿದಾಸ್ ಮಹಾರಾಜ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ತ್ರಿಗುಣ್ ತಿಳಿಸಿದ್ದಾರೆ. ಭಕ್ತರು ಆಹಾರ ನೀಡಲು ಮಂಗಳವಾರ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದಾಗ ಹರಿದಾಸ್ ಮಹಾರಾಜ್ ಮೃತಪಟ್ಟಿರುವುದನ್ನು ಬೆಳಕಿಗೆ ಬಂತು ಎಂದು ಅವರು ತಿಳಿಸಿದ್ದಾರೆ.