ಮಂಗಳೂರು: ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆ; ಶಾಖಾಧಿಕಾರಿಯ ವಿರುದ್ಧ ದೂರು

Update: 2023-05-25 16:32 GMT

ಮಂಗಳೂರು: ನಗರದ ಅಳಕೆಯ ಬ್ಯಾಂಕ್ ಆಫ್ ಬರೋಡ ಶಾಖೆಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಎಗರಿಸಿದ ಆರೋಪದ ಮೇರೆಗೆ ಬ್ಯಾಂಕ್‌ನ ಮಹಿಳಾ ಅಧಿಕಾರಿಯ ವಿರುದ್ಧ ಬ್ಯಾಂಕ್‌ನ ವ್ಯವಸ್ಥಾಕದ ಜಾಕಬ್ ಥೋಮಸ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಜಾಕಬ್ ಥೋಮಸ್ ನವೆಂಬರ್ 19, 2022ರಿಂದ ಈ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾಗಿದ್ದರು. ಈ ಬ್ಯಾಂಕ್‌ನ ಗ್ರಾಹಕ ಅಬ್ದುಲ್ ಸಮದ್ ಆಗಸ್ಟ್ 1, 2019ರಂದು 386.50 ಗ್ರಾಂ ತೂಕದ ಚಿನ್ನಾಭರಣವನ್ನು ಅಡವಿಟ್ಟು, ಸಾಲ ಪಡೆದಿದ್ದರು. ಈ ಸಂದರ್ಭ ಶಾಖೆಯಲ್ಲಿ ಓವಿಯ ಎನ್ ಎಂಬವರು ಅಧಿಕಾರಿಯಾಗಿದ್ದರು. ಸಾಲ ಪಡೆದಿದ್ದ ಅಬ್ದುಲ್ ಸಮದ್ ಗಲ್ಫ್ ದೇಶದಲ್ಲಿ ನೆಲೆಸಿದ್ದು, ಕೋವಿಡ್‌ನಿಂದಾಗಿ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.
ಈ ವರ್ಷದ ಎಪ್ರಿಲ್ 17ರಂದು ಚಿನ್ನವನ್ನು ಬಿಡಿಸಲು ಬ್ಯಾಂಕ್‌ಗೆ ಬಂದಾಗ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಇರಲಿಲ್ಲ. ಈ ಬಗ್ಗೆ 2019ರ ಆಗಸ್ಟ್ 1ರಿಂದ ಕೆಲಸ ಮಾಡಿಕೊಂಡಿದ್ದವರೆಲ್ಲ ವಿಚಾರಣೆ ಮಾಡಿದಾಗ ಓವಿಯ ಎನ್. ತನ್ನ ಕುಟುಂಬಸ್ಥರಾದ ಮರಿಯ ಬಿನೋತ್, ಅಕ್ಷಯ್, ರಾಜೇಶ್ವರಿ ಅವರೊಂದಿಗೆ ಸೇರಿಕೊಂಡು ಬ್ಯಾಂಕ್‌ನಲ್ಲಿ ಅಡಮಾನವಿರಿಸಿದ 29,25,403 ರೂ. ಮೌಲ್ಯದ ಚಿನ್ನವನ್ನು ತನ್ನ ಸ್ವಂತಕ್ಕೆ ಬಳಸಲು ಚೆನ್ನೈನ ಬ್ಯಾಂಕ್ ಆಫ್ ಬರೋಡ, ಪುರುಷವಾಖಂ ಮತ್ತು ತಿಂಡಿವಣಂ ಶಾಖೆಗಳಲ್ಲಿ ಅಡವಿಟ್ಟು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಸೂಕ್ತ ಕ್ರಮಕೈಗೊಳ್ಳಲು ದೂರಿನಲ್ಲಿ ಒತ್ತಾಯಿಸಿದ್ದಾರೆ.

Similar News