×
Ad

ತಮಿಳುನಾಡು: ಹಿಜಾಬ್ ಧರಿಸಿದ್ದ ವೈದ್ಯೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

Update: 2023-05-26 14:50 IST

ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಳಿ ಕೋಟು ಧರಿಸದ ಕಾರಣಕ್ಕೆ ಹಿಜಾಬ್ ಧರಿಸಿದ್ದ ವೈದ್ಯೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತನ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ತಿರುಪೂಂಡಿ ಮೂಲದ ಪಕ್ಷದ ಪದಾಧಿಕಾರಿ ಭುವನೇಶ್ವರ ರಾಮ್ ವಿರುದ್ಧ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ, ಕರ್ತವ್ಯದ ಸಮಯದಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ಮಹಿಳಾ ವೈದ್ಯೆಯೊಂದಿಗೆ ಜಗಳವಾಡಿದ್ದ ರಾಮ್,  ಬಿಳಿ ಕೋಟ್ ಧರಿಸಿಲ್ಲ ಯಾಕೆ ಎಂದು ವೈದ್ಯೆಯನ್ನು ಪ್ರಶ್ನಿಸಿದ್ದಾನೆ. ವೈರಲ್ ಆಗಿರುವ ವೀಡಿಯೊದಲ್ಲಿ ವೈದ್ಯರ ವಿಶ್ವಾಸಾರ್ಹತೆಯನ್ನು ಆತ ಪ್ರಶ್ನಿಸುತ್ತಿರುವುದು ಕೇಳಿಬಂದಿದೆ.

ದಕ್ಷಿಣ ಜಿಲ್ಲೆಯ ತಿರುಪೂಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 24ರಂದು ರಾತ್ರಿ ಈ ಘಟನೆ ನಡೆದಿದೆ.

"ನೀವು ನಿಜವಾಗಲೂ ಡಾಕ್ಟರ್ ಆಗಿದ್ದೀರೋ ಅಂತ ನನಗೆ ಅನುಮಾನ. ನೀವು ಏಕೆ ಯೂನಿಫಾರ್ಮ್ ನಲ್ಲಿಲ್ಲ, ಹಿಜಾಬ್ ಯಾಕೆ ತೊಟ್ಟಿದ್ದೀರಿ?" ಎಂದು ರಾಮ್  ವೈದ್ಯರ ಬಳಿ ಕೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬರುತ್ತಿದೆ.

ಡ್ಯೂಟಿ ವೈದ್ಯರ ರಕ್ಷಣೆಗೆ ಬಂದ ಪಿಎಚ್‌ಸಿಯ ನರ್ಸಿಂಗ್ ಸಿಬ್ಬಂದಿ, ರಾಮ್ ವೈದ್ಯರೊಂದಿಗೆ ಜಗಳವಾಡುತ್ತಿರುವ ವೀಡಿಯೊವನ್ನು ಕೂಡ  ಹಾಕಿದ್ದಾರೆ.

 ಬಿಜೆಪಿ ಕಾರ್ಯಕರ್ತ ರಾಮ್, ಸುಬ್ರಮಣಿಯನ್ ಎಂಬಾತನನ್ನು ಚಿಕಿತ್ಸೆಗಾಗಿ ಪಿಎಚ್‌ಸಿಗೆ ಕರೆದೊಯ್ದಿದ್ದಾನೆ.  ಆದರೆ ರಾತ್ರಿ ಡ್ಯೂಟಿ ವೈದ್ಯೆ ಹಿಜಾಬ್ ಧರಿಸಿದ್ದನ್ನು ನೋಡಿದಾಗ ಅವರೊಂದಿಗೆ ಜಗಳವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 294(ಬಿ),353 ಹಾಗೂ 298ರ  ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಹಾಗೂ ಆತನನ್ನು  ಪತ್ತೆಹಚ್ಚಲು ಹಾಗೂ  ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

Similar News