ದುಬಾರಿ ಫೋನ್‌ ನೀರಿಗೆ ಬಿತ್ತೆಂದು ಜಲಾಶಯ ಖಾಲಿ ಮಾಡಿಸಿದ ಅಧಿಕಾರಿ!

Update: 2023-05-26 11:50 GMT

ಹೊಸದಿಲ್ಲಿ: ಸ್ನೇಹಿತರೊಂದಿಗೆ ರವಿವಾರ ವಿಹಾರಕ್ಕೆಂದು ಛತ್ತೀಸಗಢದ ಖೇರ್‌ಕಟ್ಟಾ ಡ್ಯಾಂಗೆ ಹೋಗಿದ್ದ ಕಂಕೇರ್‌ ಜಿಲ್ಲೆಯ ಆಹಾರ ಅಧಿಕಾರಿಯೊಬ್ಬರು ಸೆಲ್ಫಿ ತೆಗೆಯುವ ಯತ್ನದ ವೇಳೆ ನೀರಿಗೆ ಬಿದ್ದ ತಮ್ಮ ಬೆಲೆಬಾಳುವ ಮೊಬೈಲ್‌ ಫೋನ್‌ ವಾಪಸ್‌ ಪಡೆಯಲೆಂದು  ಪಂಪ್‌ಗಳನ್ನು ಬಳಸಿ ಜಲಾಶಯದಿಂದ 21 ಲಕ್ಷ ಲೀಟರ್‌ ನೀರು ಹೊರಹಾಕಿದ ಆಘಾತಕಾರಿ ಘಟನೆ ವರದಿಯಾಗಿದೆ. ಅಧಿಕಾರಿಯನ್ನು ಜಿಲ್ಲಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕೊಯ್ಲಿಬೀಡ ಬ್ಲಾಕಿನ ಆಹಾರ ಅಧಿಕಾರಿಯಾಗಿರುವ ರಾಜೇಶ್‌ ವಿಶ್ವಾಸ್‌ ತಮ್ಮ ಸುಮಾರು ರೂ. 1 ಲಕ್ಷ ಬೆಲೆಬಾಳುವ ಮೊಬೈಲ್‌ ಫೋನ್‌ ಈ 15 ಅಡಿ ಆಳ ನೀರಿರುವ ಜಲಾಶಯದಲ್ಲಿ ಕಳೆದುಕೊಳ್ಳುತ್ತಿದ್ದಂತೆಯೇ ಸ್ಥಳೀಯರ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದರೂ. ಇದು ಫಲ ನೀಡದೇ ಇದ್ದಾಗ 30 ಅಶ್ವಶಕ್ತಿಯ ಎರಡು ಡೀಸೆಲ್‌ ಪಂಪ್‌ಗಳನ್ನು ತರಿಸಿ ಅವುಗಳ ಮೂಲಕ ಸತತ ಮೂರು ದಿನ ನೀರು ಹೊರಹಾಕಿ ತಮ್ಮ ಮೊಬೈಲ್‌ ಫೋನ್‌ ವಾಪಸ್‌ ಪಡೆದುಕೊಳ್ಳುವಲ್ಲಿ ಸಫಲರಾದರೂ ಅದು ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿದು ಬಂದಿದೆ.

ಈ ಜಲಾಶಯದ ನೀರು ಬಳಕೆಗೆ ಅನರ್ಹವಾಗಿದೆ ಹಾಗೂ ಸ್ಥಳೀಯ ಉಪವಿಭಾಗೀಯ ಅಧಿಕಾರಿಯಿಂದ ಮೌಖಿಕ ಒಪ್ಪಿಗೆ ಪಡೆದು ಸ್ವಲ್ಪ ನೀರು  ಹೊರಹಾಕಿದ್ದಾಗಿ ರಾಜೇಶ್‌ ಹೇಳಿಕೊಂಡರೂ ಅಧಿಕಾರವನ್ನು ದುರ್ಬಳಕೆ ಮಾಡಿದ್ದಕ್ಕಾಗಿ ಜಿಲ್ಲಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದಾರೆ.

ಅಧಿಕಾರಿ ತರಿಸಿದ ಪಂಪ್‌ಗಳು ಸತತ ಮೂರು ದಿನ ಕಾರ್ಯಾಚರಿಸಿ 21 ಲಕ್ಷ ಲೀಟರ್‌ ನೀರು ಹೊರಹಾಕಿತ್ತು ಹಾಗೂ ಇಷ್ಟೊಂದು ಪ್ರಮಾಣದ ನೀರು 1500 ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಕಾಗುತ್ತಿತ್ತು ಎಂದು ಹೇಳಲಾಗಿದೆ.

ಅಧಿಕಾರಿ ಈ ನೀರು ಬಳಸಲು ಅಯೋಗ್ಯವಾಗಿದೆ ಎಂದು ಹೇಳುತ್ತಿದ್ದರೂ ಈ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಕೂಡ ನೀರು ತುಂಬಿರುತ್ತದೆ ಹಾಗೂ ಪ್ರಾಣಿಗಳು ಸಹ ಈ ನೀರನ್ನು ಉಪಯೋಗಿಸುತ್ತದೆ.

ಘಟನೆ ಬಗ್ಗೆ ರಾಜ್ಯ ಸಚಿವ ಅಮರಜೀತ್‌ ಭಗತ್‌ ಅವರಲ್ಲಿ ಕೇಳಿದಾಗ ಈ ಬಗ್ಗೆ ತಿಳಿದಿಲ್ಲ ಆದರೆ ತಿಳಿದುಕೊಂಡು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Similar News