'ಒಂಬತ್ತು ವರ್ಷ - ಒಂಬತ್ತು ಸವಾಲು': ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಪಕ್ಷದ ಒಂಬತ್ತು ಪ್ರಶ್ನೆಗಳು

Update: 2023-05-26 13:12 GMT

ಹೊಸದಿಲ್ಲಿ: ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಅವರಿಗೆ ಒಂಬತ್ತು ಪ್ರಶ್ನೆಗಳನ್ನು ಕೇಳಿದೆ ಹಾಗೂ ಈ ಅವಧಿಯಲ್ಲಿನ ಹಲವು ಸಮಸ್ಯೆಗಳನ್ನು ಉಲ್ಲೇಖಿಸಿ, ಜನರ ವಿಶ್ವಾಸಕ್ಕೆ ದ್ರೋಹವೆಸಗಿದ್ದಕ್ಕಾಗಿ ಪ್ರಧಾನಿ ಕ್ಷಮೆಕೋರಬೇಕು ಎಂದು ಆಗ್ರಹಿಸಿದೆ.

ಒಂಬತ್ತು ವರ್ಷ ಪೂರೈಸಿದ ದಿನವನ್ನು 'ಮಾಫಿ ದಿವಸ್‌' ಆಗಿ ಆಚರಿಸಬೇಕೆಂದೂ ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್‌ ವಕ್ತಾರ ಜೈರಾಂ ರಮೇಶ್‌, ಪಕ್ಷದ ಪ್ರಮುಖರಾದ ಪವನ್‌ ಖೇರಾ, ಸುಪ್ರಿಯಾ ಶ್ರೀನಾತೆ ಇಂದು ಪತ್ರಿಕಾಗೋಷ್ಠಿಯಲ್ಲಿ 'ನೌ ಸಾಲ್‌, ನೌ ಸವಾಲ್‌' (ಒಂಬತ್ತು ವರ್ಷ, ಒಂಬತ್ತು ಸವಾಲು) ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

“ಈ ಒಂಬತ್ತು ಪ್ರಶ್ನೆಗಳಿಗೆ ಉತ್ತರಿಸಿ ಪ್ರಧಾನಿ ತಮ್ಮ ಮೌನ ಮುರಿಯಬೇಕು,” ಎಂದು ಜೈರಾಂ ರಮೇಶ್‌ ಆಗ್ರಹಿಸಿದ್ದಾರೆ.

“ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ? ಶ್ರೀಮಂತರು ಇನ್ನಷ್ಟು ಶ್ರೀಮಂತರೇಕೆ ಆಗುತ್ತಿದ್ದಾರೆ, ಬಡವರು ಇನ್ನಷ್ಟು ಬಡವರೇಕೆ ಆಗುತ್ತಿದ್ದಾರೆ? ಸಾರ್ವಜನಿಕ ಆಸ್ತಿಗಳನ್ನು ಪ್ರಧಾನಿ ಮೋದಿಯ ಸ್ನೇಹಿತರಿಗೆ ಏಕೆ ಮಾರಾಟ ಮಾಡಲಾಗುತ್ತಿದೆ?,” ಎಂದು ಜೈರಾಂ ರಮೇಶ್‌ ಪ್ರಧಾನಿಯನ್ನು ಪ್ರಶ್ನಿಸಿದರು.

“ಮೂರು ಕೃಷಿ ಕಾನೂನುಗಳನ್ನು ವಾಪಸ್‌ ಪಡೆಯುವಾಗ ರೈತರಿಗೆ ನೀಡಲಾದ ಆಶ್ವಾಸನೆಗಳನ್ನು ಏಕೆ ಗೌರವಿಸಲಾಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಏಕೆ ಖಾತರಿಗೊಳಿಸಲಾಗಿಲ್ಲ? ಕಳೆದ ಒಂಬತ್ತು ವರ್ಷಗಳಲ್ಲಿ ರೈತರ ಆದಾಯ ಏಕೆ ದ್ವಿಗುಣಗೊಳ್ಳಲಿಲ್ಲ?,” ಎಂದೂ ಅವರು ಪ್ರಶ್ನಿಸಿದರು.

“ಜನರು ಕಷ್ಟಪಟ್ಟು ಎಲ್‌ಐಸಿಯಲ್ಲಿ ಹೂಡಿದ ಹಣವನ್ನು ತಮ್ಮ ಸ್ನೇಹಿತ 'ಅದಾನಿ'ಯ ಪ್ರಯೋಜನಕ್ಕಾಗಿ ಏಕೆ ಅಪಾಯದಲ್ಲಿ ದೂಡಿದ್ದೀರಿ? ಕಳ್ಳರನ್ನು ಏಕೆ ತಪ್ಪಿಸಲು ಬಿಡುತ್ತಿದ್ದೀರಿ? ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಏಕೆ ಮೌನವಾಗಿದ್ದೀರಿ?” ಎಂದೂ ಅವರು ಪ್ರಶ್ನಿಸಿದ್ದಾರೆ.

“ನೀವು ಚೀನಾಗೆ 2020ರಲ್ಲಿ ನೀಡಿದ ಕ್ಲೀನ್‌ ಚಿಟ್‌ನ ನಂತರವೂ ಅವರು ಏಕೆ ಭಾರತೀಯ ಭೂಭಾಗವನ್ನು ಅತಿಕ್ರಮಿಸುತ್ತಿದ್ದಾರೆ? ಮಹಿಳೆಯರ, ದಲಿತರ, ಪರಿಶಿಷ್ಟರ, ಇತರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಏಕೆ ಮೌನವಾಗಿದ್ದೀರಿ. ಜಾತಿ ಜನಗಣತಿಗೆ ಬೇಡಿಕೆಯನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ?” ಎಂದು ಜೈರಾಂ ರಮೇಶ್‌ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

Similar News