ಯಾವುದೇ ಸಾಕ್ಷ್ಯಾಧಾರವಿಲ್ಲ: 'ಸೆಂಗೋಲ್' ಕುರಿತ ಕೇಂದ್ರ ಸರ್ಕಾರದ ಪ್ರತಿಪಾದನೆಗೆ ಜೈರಾಮ್ ರಮೇಶ್ ತಿರುಗೇಟು

Update: 2023-05-26 12:35 GMT

ಹೊಸದಿಲ್ಲಿ: ಸೆಂಗೋಲ್ ಕುರಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿಪಾದನೆಯನ್ನು ಶುಕ್ರವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. ಬ್ರಿಟಿಷ್ ಸರ್ಕಾರವು ಭಾರತದ ಪ್ರಥಮ ಚುನಾಯಿತ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡಿದ್ದರ ಸಂಕೇತ ರಾಜಸತ್ತೆಯ ಸೆಂಗೋಲ್ ಎಂಬುದಕ್ಕೆ ಯಾವುದೇ ದಾಖಲೀಕರಣಗೊಂಡ ಸಾಕ್ಷ್ಯಾಧಾರವಿಲ್ಲವೆಂದು ಅವರು ಪ್ರತಿಪಾದಿಸಿದ್ದಾರೆ.

ಈ ರಾಜದಂಡವನ್ನು ಬ್ರಿಟಿಷ್ ಸರ್ಕಾರದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು ಎಂಬುದನ್ನು ವಿವರಿಸಲಿಕ್ಕೆ ಮೌಂಟ್ ಬ್ಯಾಟನ್, ರಾಜಾಜಿ ಹಾಗೂ ನೆಹರೂ ಸೇರಿದಂತೆ ಯಾವುದರ ಕುರಿತೂ ದಾಖಲೀಕರಣಗೊಂಡ ಸಾಕ್ಷ್ಯಾಧಾರವಿಲ್ಲ. ಇದನ್ನು ಅಳವಡಿಸಿಕೊಳ್ಳಲು ಮಾಡಲಾಗುತ್ತಿರುವ ಪ್ರತಿಪಾದನೆಗಳೆಲ್ಲವೂ ಸಾಮಾನ್ಯ ಹಾಗೂ ಸರಳೀಕೃತಗೊಂಡ ಸುಳ್ಳು. ಈ ಸುದ್ದಿಯನ್ನು ಒಟ್ಟಾರೆ ಹಾಗೂ ಸಂಪೂರ್ಣವಾಗಿ ಕೆಲವರ ಮಿದುಳಿನ ಸೃಷ್ಟಿಯಾಗಿದ್ದು ಅದನ್ನು ವಾಟ್ಸ್ ಆ್ಯಪ್ ಮೂಲಕ ಹರಿಬಿಡಲಾಗಿದೆ ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

"ನೂತನ ಸಂಸತ್ ಭವನವು ವಾಟ್ಸ್ ಆ್ಯಪ್ ವಿಶ್ವವಿದ್ಯಾಲಯದ ಸಾಂಕೇತಿಕ ಸುಳ್ಳು ನಿರೂಪಣೆಯ ಮೂಲಕ ಲೋಕಾರ್ಪಣೆಗೊಳ್ಳುತ್ತಿರುವುದರಲ್ಲಿ ಏನಾದರೂ ಅಚ್ಚರಿ ಇದೆಯೆ? ಬಿಜೆಪಿ/ಆರ್‌ಎಸ್‌ಎಸ್ ವಿರೂಪಕರು ಮತ್ತೆ ಗರಿಷ್ಠ ಪ್ರತಿಪಾದನೆ, ಕನಿಷ್ಠ ಸಾಕ್ಷ್ಯಾಧಾರಗಳೊಂದಿಗೆ ಬೆತ್ತಲಾಗಿದ್ದಾರೆ" ಎಂದು ತಮ್ಮ ಟ್ವೀಟ್‌ನಲ್ಲಿ ರಮೇಶ್ ಜೈರಾಮ್ ಟೀಕಾಪ್ರಹಾರ ನಡೆಸಿದ್ದಾರೆ.

ರವಿವಾರ ನೂತನ ಸಂಸತ್ ಭವನವು ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಗೊಂಡ ನಂತರ ರಾಜದಂಡವಾದ ಸೆಂಗೋಲ್ ಅನ್ನು ಲೋಕಸಭಾಧ್ಯಕ್ಷರ ಪೀಠದ ಬಳಿ ಪ್ರತಿಷ್ಠಾಪಿಸಲಾಗುತ್ತದೆ.

Similar News