ಕುನೋ ರಾಷ್ಟ್ರೀಯ ಉದ್ಯಾನವನದ ಚೀತಾ ಟ್ರ್ಯಾಕಿಂಗ್‌ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆ

Update: 2023-05-26 14:56 GMT

ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದ ಚೀತಾ ಟ್ರ್ಯಾಕಿಂಗ್ ತಂಡದ ಮೇಲೆ ಶುಕ್ರವಾರ ಬೆಳಗ್ಗೆ ಗ್ರಾಮಸ್ಥರ ಗುಂಪು ದಾಳಿ ಮಾಡಿದೆ. ಚೀತಾ ಟ್ರ್ಯಾಕಿಂಗ್‌ ತಂಡವನ್ನು ಡಕಾಯಿತರು ಎಂದು ತಪ್ಪಾಗಿ ಭಾವಿಸಿದ್ದ ಗ್ರಾಮಸ್ಥರು ದಾಳಿ ನಡೆಸಿದ್ದು, ದಾಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೋಹಾರಿ ಪ್ರದೇಶದ ಬುರಖೇಡಾ ಗ್ರಾಮದ ಬಳಿ ನಾಲ್ವರು ಸದಸ್ಯರ ಟ್ರ್ಯಾಕಿಂಗ್ ತಂಡವು ಸಂರಕ್ಷಿತ ಪ್ರದೇಶದಿಂದ ಹೊರಬಂದ ಹೆಣ್ಣು ಚೀತಾವನ್ನು ಪತ್ತೆಹಚ್ಚಲು ಅರಣ್ಯ ಪ್ರದೇಶಕ್ಕೆ ಬಂದಿತ್ತು.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆ ಪ್ರದೇಶದಲ್ಲಿ ಇರುವುದನ್ನು ಪ್ರಶ್ನಿಸಿದ ಗ್ರಾಮಸ್ಥರು ತಂಡವನ್ನು ತಡೆದು ಪ್ರಶ್ನಿಸಿದ್ದಾರೆ. ತಾವು ಚೀತಾ ಜಾಡು ಹಿಡಿದು ಬಂದಿದ್ದೇವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ವಿವರಿಸಿದರೂ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಪವನ್ ಅಗರ್ವಾಲ್ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಅರಣ್ಯ ಇಲಾಖೆಯ ವಾಹನಕ್ಕೂ ಹಾನಿಯಾಗಿದೆ. ದಾಳಿಯ ನಂತರ, ಅರಣ್ಯ ಸಿಬ್ಬಂದಿ ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಎರಡನೇ ತಂಡವನ್ನು ಕಳುಹಿಸಲಾಯಿತು ಎಂದು ವರದಿಯಾಗಿದೆ.

"ನಮ್ಮ ಚೀತಾ ಟ್ರ್ಯಾಕಿಂಗ್ ತಂಡವನ್ನು ಗ್ರಾಮಸ್ಥರು ತಡೆದು ಹಲ್ಲೆ  ಮಾಡಿದ್ದಾರೆ. ಒಬ್ಬ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ. ನಾವು ಪೊಹಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ." ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

Similar News