ಮಂಗಳೂರು: ಮೇ 28ರಂದು ಪ್ರಾಜೆಕ್ಟ್ ಗ್ರೀನ್‌ಗೆ ಚಾಲನೆ

Update: 2023-05-26 16:33 GMT

ಮಂಗಳೂರು:  ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್  ಮಂಗಳೂರು ವತಿಯಿಂದ ಎನ್‌ಇಸಿಎಫ್ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಸಹಕಾರದೊಂದಿಗೆ  ಪ್ರಾಜೆಕ್ಟ್ ಗ್ರೀನ್-23 ಎಂಬ ಪರಿಸರ ಜಾಗೃತಿಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.‌

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶಮ್ಮಿ ಶಿರಿ, ಪ್ರಾಜೆಕ್ಟ್ ಗ್ರೀನ್ ಇದರ ಉದ್ಘಾಟನಾ ಕಾರ್ಯಕ್ರಮ ಮೇ 28ರಂದು ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಬೆಳಗ್ಗೆ 7 ಗಂಟೆಗೆ ನಡೆಯಲಿದೆ. ಕಡಲ ಸ್ವಚ್ಛತೆಯೊಂದಿಗೆ ಯೋಜನೆಗೆ ಚಾಲನೆ ದೊರೆಯಲಿದೆ. ಜನತೆ ಪ್ರಕೃತಿ ಸಂರಕ್ಷಣೆ, ಸ್ವಚ್ಛತೆಯತ್ತ ವಿಶೇಷ ಆದ್ಯತೆ ನೀಡಬೇಕೆಂಬುದೇ ಇದರ ಮುಖ್ಯ ಉದ್ದೇಶ ಎಂದರು.

ಸಾರ್ವಜನಿಕರು, ವಿವಿಧ ಸಂಘಟನೆಗಳು, ಯುವಕರು ಕೂಡ ತಮ್ಮ ತಮ್ಮ ಪರಿಸರದಲ್ಲಿ ಸ್ವಚ್ಛತೆ, ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಹೀಗೆ ನಿರಂತರವಾಗಿ ಕಾರ್ಯಕ್ರಮಸಂಘಟಿಸಿ ಯಶಸ್ವಿಯಾಗುವ ತಂಡವೊಂದಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಪರಿಸರ ಜಾಗೃತಿಯತ್ತ ಒಲವು ಹೆಚ್ಚಾಗಬೇಕೆಂಬುದು ಇದರ ಉದ್ದೇಶವಾಗಿದೆ. ಪ್ರಸ್ತುತ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸುವತ್ತ ಇಟ್ಟಿರುವ ಮೊದಲ ಹೆಜ್ಜೆಯೇ ಈ ಪ್ರಾಜೆಕ್ಟ್. ಕಸದ ನಿರ್ಮೂಲನೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು, ಗಿಡಗಳನ್ನು ನೆಡುವುದು ಮುಂತಾದ ಸರಳ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಬೇಕು. ಈ ಮೂಲಕ ಹೊಸ ಬದಲಾವಣೆ ತರಲು ಸಾಧ್ಯ. ನಾಲ್ಕು ಅಥವಾ ಹೆಚ್ಚು ಸ್ನೇಹಿತರು ಒಗ್ಗೂಡಿ ಪರಿಸರ ಸ್ವಚ್ಛತೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಫೋಟೋಗಳನ್ನು ಕಳಿಸಿಕೊಡಬೇಕು. ಉತ್ತಮವಾಗಿ ಪರಿಸರ ನಿರ್ವಹಣೆ ತೋರುವ ತಂಡ ಬಹುಮಾನ ಗೆಲ್ಲಲಿದೆ. ಹೆಚ್ಚಿನ ಮಾಹಿತಿಗೆ 9632171156 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಕೃಷ್ಣಾನಂದ ಶೆಣೈ, ಕೋಶಾಧಿಕಾರಿ ಗಣೇಶ್ ಪ್ರಸಾದ್, ಎನ್‌ಇಸಿಎಫ್‌ ಇದರ ಹರೀಶ್ ರಾಜ್ ಕುಮಾರ್, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ವಿಘ್ನೇಶ್ ಜೆ.ಪಿ ಉಪಸ್ಥಿತರಿದ್ದರು.

Similar News