ಮಲೇಶ್ಯ ಮಾಸ್ಟರ್ಸ್: ಸಿಂಧು, ಪ್ರಣಯ್ ಸೆಮಿಗೆ, ಶ್ರೀಕಾಂತ್ ಔಟ್

Update: 2023-05-26 18:19 GMT

ಕೌಲಾಲಂಪುರ, ಮೇ 26: ಭಾರತದ ಸ್ಟಾರ್ ಶಟ್ಲರ್ಗಳಾದ  ಪಿ.ವಿ. ಸಿಂಧು ಹಾಗೂ ಎಚ್.ಎಸ್.ಪ್ರಣಯ್  ಮಲೇಶ್ಯ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದ್ದಾರೆ. 

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಯಿ ಮಾನ್ ಝಾಂಗ್ ವಿರುದ್ಧ ಸಿಂಧು ಪ್ರಯಾಸಕಾರಿ ಗೆಲುವು ದಾಖಲಿಸಿದರು. 

ಡಬಲ್ ಒಲಿಂಪಿಯನ್ ಸಿಂಧು ಕೆಳ ರ್ಯಾಂಕಿನ ಯಿ ಮಾನ್ ಝಾಂಗ್ರನ್ನು 21-16, 13-21, 22-20 ಗೇಮ್ ಗಳ ಅಂತರದಿಂದ ಮಣಿಸಿದರು. ವಿಶ್ವದ ನಂ.13ನೇ ಆಟಗಾರ್ತಿ ಸಿಂಧು ಕಳೆದ ವರ್ಷ ಆಲ್ ಇಂಗ್ಲೆಂಡ್ ಓಪನ್ನ ಅಂತಿಮ-32ರ ಸುತ್ತಿನಲ್ಲಿ 18ನೇ ರ್ಯಾಂಕಿನ ಝಾಂಗ್ ವಿರುದ್ಧ ಸೋತಿದ್ದರು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಆರನೇ ಶ್ರೇಯಾಂಕದ ಸಿಂಧು ಶನಿವಾರ ನಡೆಯಲಿರುವ ಸೆಮಿ ಫೈನಲ್ ಲ್ಲಿ 7ನೇ ಶ್ರೇಯಾಂಕದ ಹಾಗೂ ವಿಶ್ವದ ನಂ.1 ಆಟಗಾರ್ತಿ ಗ್ರೆಗೋರಿಯ ಮರಿಸ್ಕಾ ಟುನ್ಜುಂಗ್ರನ್ನು ಎದುರಿಸಲಿದ್ದಾರೆ. ಟುನ್ಜುಂಗ್ ಮತ್ತೊಂದು ಕ್ವಾರ್ಟರ್ ಫೈನಲ್  ನಲ್ಲಿ ಚೀನಾದ 2ನೇ ಶ್ರೇಯಾಂಕದ ಯಿ ಝಿ ವಾಂಗ್ರನ್ನು 21-18, 22-20 ಗೇಮ್ ಗಳ ಅಂತರದಿಂದ ಸೋಲಿಸಿದ್ದಾರೆ.

ಇಂಡೋನೇಶ್ಯದ ಟುನ್ಜುಂಗ್ ಇತ್ತೀಚೆಗಿನ ದಿನಗಳಲ್ಲಿ ಶ್ರೇಷ್ಠ ಫಾರ್ಮ್ನಲ್ಲಿದ್ದಾರೆ. ಎಪ್ರಿಲ್ ನಲ್ಲಿ ನಡೆದಿದ್ದ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಫೈನಲ್ ನಲ್ಲಿ ಸಿಂಧು ಅವರು ಟುನ್ಜುಂಗ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ. ಆದಾಗ್ಯೂ ಹೈದರಾಬಾದ್ ಆಟಗಾರ್ತಿ ಟುನ್ಜುಂಗ್ ವಿರುದ್ಧ 7-1 ಹೆಡ್-ಟು-ಹೆಡ್ ದಾಖಲೆಯೊಂದಿಗೆ ಸೆಮಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಪ್ರಣಯ್ ಜಪಾನ್ ನ ಕೆಂಟಾ ನಿಶಿಮೊಟೊರನ್ನು 25-23, 18-21, 21-13 ಅಂತರದಿಂದ ಸೋಲಿಸಿದರು.

ವಿಶ್ವದ ನಂ.9ನೇ ಆಟಗಾರ ಪ್ರಣಯ್ ಇಂಡೋನೇಶ್ಯದ ಕ್ವಾಲಿಫೈಯರ್ ಕ್ರಿಸ್ಟಿಯನ್ ಅಡಿನಾಟಾರನ್ನು ಶನಿವಾರ ನಡೆಯಲಿರುವ  ಸೆಮಿ ಫೈನಲ್ ನಲ್ಲಿ ಎದುರಿಸಲಿದ್ದಾರೆ. ಕ್ರಿಸ್ಟಿಯನ್ 57 ನಿಮಿಷಗಳ ಕಾಲ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ರನ್ನು 16-21, 21-16, 21-11 ಅಂತರದಿಂದ ಸೋಲಿಸಿದ್ದಾರೆ.

ಪ್ರಣಯ್ ಈ ತನಕ 21ರ ಹರೆಯದ ಕ್ರಿಸ್ಟಿಯನ್ ಅಡಿನಾಟಾ ವಿರುದ್ಧ ಆಡಿಲ್ಲ. ಕ್ರಿಸ್ಟಿಯನ್ ಕಳೆದ ವರ್ಷವಷ್ಟೇ ಸೀನಿಯರ್ ಮಟ್ಟದಲ್ಲಿ ಆಡಲು ಆರಂಭಿಸಿದ್ದಾರೆ.

Similar News