ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಆರು ಮುಖ್ಯಮಂತ್ರಿಗಳ ನಿರ್ಧಾರ

Update: 2023-05-27 02:32 GMT

ಹೊಸದಿಲ್ಲಿ: ಭಾನುವಾರ ನಡೆಯುವ ಸಂಸತ್ತಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು 21 ವಿರೋಧ ಪಕ್ಷಗಳು ಬಹಿಷ್ಕರಿಸಿರುವ ಬೆನ್ನಲ್ಲೇ, ಶನಿವಾರ ನಡೆಯುವ ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸಲು ಬಿಜೆಪಿಯೇತರ ಪಕ್ಷಗಳಿಗೆ ಸೇರಿದ ಆರು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಜನರಲ್‌ಗಳು ಮಂಡಳಿಯ ಸದಸ್ಯರಾಗಿರುತ್ತಾರೆ.

ನೀತಿ ಆಯೋಗದ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಎಂಎಸ್‌ಎಂಇ, ಮೂಲಸೌಕರ್ಯ ಹಾಗೂ ಹೂಡಿಕೆ, ಅನುಸರಣೆಯನ್ನು ಕನಿಷ್ಠಗೊಳಿಸುವುದು, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕೌಶಲ ಅಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯ ಸೇರಿದಂತೆ "ವಿಕಸಿತ ಭಾರತ" ಮಾರ್ಗಸೂಚಿಯ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್‌ನ ಭಗವಂತ್ ಮಾನ್, ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ.ಚಂದ್ರಶೇಖರ್ ರಾವ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಸಭೆಯನ್ನು ಬಹಿಷ್ಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಹಿಷ್ಕಾರ ನಿರ್ಧಾರದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರ ರಾಜಧಾನಿ ಪ್ರದೇಶದ ಸೇವೆಗಳ ಮೇಲೆ ಲೆಫ್ಟಿನೆಂಟ್ ಗವರ್ನರ್ ಅವರ ನಿಯಂತ್ರಣ ಪುನಃಸ್ಥಾಪಿಸುವ "ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ" ಸುಗ್ರೀವಾಜ್ಞೆಯನ್ನು ವಿರೋಧಿಸಿ ಸಭೆ ಬಹಿಷ್ಕರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Similar News