ನಾಲ್ಕು ತಿಂಗಳಿಂದ ನಾಪತ್ತೆಯಾಗಿದ್ದ ಬ್ರೆಝಿಲ್ ನಟ ಶವವಾಗಿ ಪತ್ತೆ

Update: 2023-05-27 03:10 GMT

ರಿಯೊ ಡೆ ಜನೈರೊ: ಹಲವು ತಿಂಗಳಿಂದ ನಾಪತ್ತೆಯಾಗಿದ್ದ ಖ್ಯಾತ ಬ್ರೆಝಿಲಿಯನ್ ನಟ ಜೆಫರ್ಸನ್ ಮಚಾಡೊ ಅವರು ಇಲ್ಲಿನ ಮನೆಯೊಂದರ ಹೊರಗೆ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಅವರ ಕುಟುಂಬ ಸ್ನೇಹಿತೆ ಸಿಂತಿಯಾ ಹಿಲ್ಸೆಂಡೆಗರ್ ಇನ್‌ಸ್ಟ್ರಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ನಟ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ. "ಜೆಫ್ 05/22/2023ರಂದು ನಿರ್ಜೀವವಾಗಿ ಪತ್ತೆಯಾಗಿದ್ದಾರೆ ಎಂದು ಅತೀವ ಬೇಸರಿಂದ ಪ್ರಕಟಿಸುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ.

44 ವರ್ಷ ವಯಸ್ಸಿನ ನಟನನ್ನು ಸಂಕೋಲೆಯಿಂದ ಬಿಗಿದು ಮರದ ಪೆಟ್ಟಿಗೆಯಲ್ಲಿ ಹಾಕಿ ಮನೆಯೊಂದರೆ ಹಿಂದೆ ಆರಡಿ ಆಳದಲ್ಲಿ ಹೂತು ಹಾಕಿ ಅದರ ಮೇಳೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

"ಅವರ ಕೈಯನ್ನು ತಲೆಯ ಹಿಂದೆ ಕಟ್ಟಿಹಾಕಲಾಗಿತ್ತು. ಅವರ ಮನೆಯಲ್ಲೇ ಇದ್ದ ಪೆಟ್ಟಿಗೆಯನ್ನು ಹೋಲುವ ಪೆಟ್ಟಿಗೆಯಲ್ಲಿ ಹೂತಿಡಲಾಗಿತ್ತು" ಎಂದು ಕುಟುಂಬದ ವಕೀಲ ಜೈರೊ ಮೆಗಾಸಿಸ್ ಹೇಳಿದ್ದಾರೆ. ಬೆರಳಚ್ಚು ಮತ್ತು ಅವರ ಕತ್ತಿನಲ್ಲಿದ್ದ ರೇಖೆಯ ಆಧಾರದಲ್ಲಿ ದೇಹವನ್ನು ಗುರುತಿಸಲಾಗಿದ್ದು, ಅವರನ್ನು ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

"ಜೆಫರ್‌ಸನ್ ಅವರನ್ನು ಮತ್ಸರಿ, ದುಷ್ಟ ಹಾಗೂ ನಿರ್ಲಜ್ಜ ಮಂದಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಇನ್ನಷ್ಟು ಮಾಹಿತಿಗಳು ಹೊರಬೀಳಲಿದ್ದು, ಆರ್‌ಜೆ ಟೌನ್‌ಶಿಪ್ ಪೊಲೀಸರು ಅದ್ಭುತ ಕಾರ್ಯ ಮಾಡಿದ್ದಾರೆ. ಸಣ್ಣ ಪುಟ್ಟ ಮಾಹಿತಿಗಳ ಮೂಲಕ ನೆರವಾದ ಎಲ್ಲರಿಗೂ ಕೃತಜ್ಞತೆಗಳು" ಎಂದು ಕುಟುಂಬ ಹೇಳಿದೆ.

Similar News