ಮೀರತ್: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ‘ವಂದೇ ಮಾತರಂ’ ಹಾಡುವ ಕುರಿತು ಘರ್ಷಣೆ

ಇಬ್ಬರು ಬಿಜೆಪಿ ಕೌನ್ಸಿಲರ್‌ಗಳ ಬಂಧನ, ಬಿಡುಗಡೆ

Update: 2023-05-27 17:40 GMT

ಲಕ್ನೊ, ಮೇ 27:  ಉತ್ತರಪ್ರದೇಶದ ಮೀರತ್‌ನಲ್ಲಿ ನೂತನವಾಗಿ ಚುನಾಯಿತರಾಗಿರುವ ಮೇಯರ್ ಹಾಗೂ ಕೌನ್ಸಿಲರ್‌ಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ‘ವಂದೇ ಮಾತರಂ’ ಹಾಡುವ ಕುರಿತಂತೆ ನಡೆದ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಬಿಜೆಪಿ ಕೌನ್ಸಿಲರ್‌ಗಳನ್ನು ಬಂಧಿಸಿದ್ದಾರೆ. ಅನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.  

ಈ ಘಟನೆ ಚೌಧರಿ ಚರಣ್ ಸಿಂಗ್ ವಿ.ವಿ. ಸಭಾಂಗಣದಲ್ಲಿ ಶುಕ್ರವಾರ ನಡೆದ ಮೀರತ್‌ನ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಡೆದಿದೆ. ಕಾರ್ಯಕ್ರಮದ ಆರಂಭದಲ್ಲಿ ‘‘ವಂದೇ ಮಾತರಂ’’ ಹಾಡುವ ಕುರಿತು ಎಐಎಂಐಎಂ ಹಾಗೂ ಬಿಜೆಪಿ ಕೌನ್ಸಿಲರ್‌ಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದು ಈ ಘರ್ಷಣೆಗೆ ಕಾರಣವಾಗಿದೆ.  

ಎಐಎಂಐಎಂ  ಕೌನ್ಸಿಲರ್‌ರ ಪತಿ ದಿಲ್‌ಶಾದ್ ಸೈಫಿ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಬಿಜೆಪಿ ನಾಯಕರ ವಿರುದ್ಧ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್‌ಎಚ್‌ಒ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ. 
ಬಿಜೆಪಿ ಕೌನ್ಸಿಲರ್ ರಾಜೀವ್ ಕಾಳೆ ಕೂಡ 8 ಮಂದಿ ಎಐಎಂಐಎಂ ಕೌನ್ಸಿಲರ್‌ಗಳ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ರಾಷ್ಟ್ರಗೀತೆಗೆ ಅವಮಾನ ಮಾಡಿರುವುದಾಗಿ ಆರೋಪಿಸಿ ರಾಜ್ಯ ಸಭಾ ಸದಸ್ಯ ಲಕ್ಷ್ಮೀಕಾಂತ್ ಬಾಜಪೇಯಿ ಅವರು ದೂರು ದಾಖಲಿಸಿದ್ದಾರೆ. ಆದರೆ, ಬಾಜಪೇಯಿ ದೂರಿಗೆ ಸಂಬಂಧಿಸಿ ಇದುವರೆಗೆ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

‘ವಂದೇ ಮಾತರಂ’ ಹಾಡುವ ಕುರಿತಂತೆ ನಡೆದ ವಾಗ್ವಾದದ ಸಂದರ್ಭ ಎಐಎಂಐಎಂನ ಕೌನ್ಸಿಲರ್‌ಗಳ ಮೇಲೆ ಬಿಜೆಪಿ ಕೌನ್ಸಿಲರ್‌ಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಿಲ್‌ಶಾದ್ ಸೈಪಿ ದಾಖಲಿಸಿದ ದೂರಿನ ಆಧಾರದಲ್ಲಿ ಬಿಜೆಪಿ ಕೌನ್ಸಿಲರ್‌ಗಳಾದ ರಾಜೀವ್ ಕಾಳೆ, ಉತ್ತಮ್ ಸೈನಿ ಹಾಗೂ ಕವಿತಾ ರಾಹಿ ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿವಿಲ್ ಲೇನ್‌ನ ಸಿಒ ಅರವಿಂದ್ ಚೌರಾಸಿಯಾ ತಿಳಿಸಿದ್ದಾರೆ.
‘ವಂದೇ ಮಾತರಂ’ ಹಾಡುವ ಸಂದರ್ಭ ಎಐಎಂಐಎಂನ ಸದಸ್ಯರು ನಿಂತುಕೊಳ್ಳದೆ ಅಶಿಸ್ತು ತೋರಿದರು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಈ ಬಗ್ಗೆ ಸದನ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ವಿಷಯದಲ್ಲಿ ಪೊಲೀಸರಿಗೆ ಹೆಚ್ಚಿನ ಪಾತ್ರವಿಲ್ಲ ಎಂದು ಚೌರಾಸಿಯ ತಿಳಿಸಿದ್ದಾರೆ.

Similar News