ಮಣಿಪುರ: ಅಂಗಡಿಗೆ ಬೆಂಕಿ ಹಚ್ಚಲು ಯತ್ನಿಸಿದ ಆರೋಪ; ಆರ್‌ಎಎಫ್‌ನ ಮೂವರು ಅಧಿಕಾರಿಗಳು ವಶಕ್ಕೆ

Update: 2023-05-27 17:54 GMT

ಇಂಫಾಲ, ಮೇ 27: ಇಲ್ಲಿನ ನ್ಯೂ ಚೆಕೋನ್ ಪ್ರದೇಶದಲ್ಲಿರುವ ಮಾಂಸದ ಅಂಗಡಿಗೆ  ಬೆಂಕಿ ಹಚ್ಚಲು ಪ್ರಯತ್ನಿಸಿದ ಆರೋಪದಲ್ಲಿ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್)ಯ  103 ಬೆಟಾಲಿಯನ್‌ಗೆ ಸೇರಿದ ಇನ್ಸ್‌ಪೆಕ್ಟರ್ ಶ್ರೇಣಿಯ ಒಬ್ಬರು ಸೇರಿದಂತೆ ಮೂವರು ಭದ್ರತಾ ಅಧಿಕಾರಿಗಳನ್ನು ಮಣಿಪುರ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. 

ಈ ಅಧಿಕಾರಿಗಳನ್ನು ಕುಲ್‌ದೀಪ್ ಸಿಂಗ್, ಪ್ರದೀಪ್ ಕುಮಾರ್ ಹಾಗೂ ಸೋಮದೇವ್ ಅರಯ ಎಂದು ಗುರುತಿಸಲಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಆರಂಭವಾದ ಎರಡು ದಿನಗಳ ಬಳಿಕ ಈ ಘಟನೆ ನಡೆದಿದೆ.
 
ನಾಗಾ ಸಮುದಾಯದ ವ್ಯಕ್ತಿಯ ಮಾಲಿಕತ್ವದ ಕಟ್ಟಡದ ನೆಲ ಮಹಡಿಯಲ್ಲಿ ಇರುವ ಈ ಮಾಂಸದ ಅಂಗಡಿ ತನೀಶ್ ಮಲಿಕ್ ಎಂಬವರಿಗೆ ಸೇರಿದೆ. 
‘‘ಮುಂದಿನ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಯನ್ನು ನಾವು ಪರಿಶೀಲಿಸಿದೆವು. ಮೂವರು ವ್ಯಕ್ತಿಗಳು ಬಿಳಿ ಬಣ್ಣದ ಜಿಪ್ಸಿಯಿಂದ ಇಳಿಯುತ್ತಿರುವುದನ್ನು ನಾವು ನೋಡಿದೆವು. ಅವರು ಮುಂದಿನ ಅಂಗಡಿಯ ಎದುರಿನಿಂದ ಸೆಣಬಿನ ಚೀಲವನ್ನು ಸಂಗ್ರಹಿಸಿದರು. ಅದಕ್ಕೆ ಬೆಂಕಿ ಹಚ್ಚಿದರು ಹಾಗೂ ನನ್ನ ಅಂಗಡಿಯ ಹೊರಗಿರುವ ಟೇಬಲ್ ಮೇಲೆ ಇರಿಸಿದರು’’ ಎಂದು ತನೀಶ್ ಮಲಿಕ್ ಅವರು ತಿಳಿಸಿದ್ದಾರೆ. 
ಅವರನ್ನು ಅವರ ಘಟಕದಿಂದ ಅಮಾನತುಗೊಳಿಸಲಾಗಿದೆ. ಆಗ ಅವರು ಮದ್ಯ ಸೇವಿಸಿದ್ದರು. ಅನಂತರ ಕ್ಷಮೆ ಕೋರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆಯ ಹೊರಗೆ ಶನಿವಾರ ಅಪರಾಹ್ನ ಪ್ರತಿಭಟನೆ ನಡೆಸಿದರು. ಅನಂತರ ಆರ್‌ಎಎಫ್‌ನ ಮೂವರು ಅಧಿಕಾರಿಗಳನ್ನು ಪೊರಂಪಾಟ್ ಪೊಲೀಸ್ ಠಾಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು.  

‘‘ಈ ಜನರು ನಮ್ಮನ್ನು ರಕ್ಷಿಸುವುದಿಲ್ಲ. ಬದಲಾಗಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಾರೆ. ಇಂತಹ ಸಂದರ್ಭ ಈ ರೀತಿ ಮಾಡುವುದನ್ನು ನೀವು ಊಹಿಸಬಲ್ಲಿರಾ?’’ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ.

Similar News