ಟಿಪ್ಪುಖಡ್ಗ ಮತ್ತು ಸತ್ಯದ ಹೊಳಪು

Update: 2023-05-28 04:20 GMT

ಈ ವಿಶಿಷ್ಟ ಖಡ್ಗ ಈಗ ಮತ್ತೊಮ್ಮೆ ಹರಾಜಿನಲ್ಲಿ 145 ಕೋಟಿ ರೂ.ಗೆ ಮಾರಾಟವಾಗಿದೆ. ಆಗ ಒಂದೂವರೆ ಕೋಟಿಗೆ ಮಾರಾಟವಾಗಿದ್ದ ಖಡ್ಗವನ್ನು ಈಗ ಅದರ ಹಲವು ಪಟ್ಟು ಹೆಚ್ಚು ಬೆಲೆಗೆ ಖರೀದಿಸಲಾಗಿದೆ. ಚಾರಿತ್ರಿಕ ಹಿನ್ನೆಲೆಯ ಟಿಪ್ಪುಖಡ್ಗವನ್ನು ಅನಾಮಧೇಯ ವ್ಯಕ್ತಿಯ ಪರವಾಗಿ ಬೊನ್ಹಾಮ್ಸ್ ಹರಾಜು ಸಂಸ್ಥೆ ಖರೀದಿಸಿದೆ.

ಮೈಸೂರು ಹುಲಿ ಟಿಪ್ಪುಸುಲ್ತಾನ್ ಘನತೆಯ ಚರಿತ್ರೆ ಮತ್ತೆ ಮತ್ತೆ ಪ್ರಜ್ವಲಿಸುತ್ತಲೇ ಇದೆ, ಇರುತ್ತದೆ. ಟಿಪ್ಪುಬಗ್ಗೆ ಅಪಪ್ರಚಾರ ಮಾಡಿದಷ್ಟೂ, ಸುಳ್ಳು ಹೇಳಿದಷ್ಟೂ ಟಿಪ್ಪುಹಾಗೂ ಆತನಿಗೆ ಸಂಬಂಧಿಸಿದ ಪ್ರತಿಯೊಂದರ ಮೌಲ್ಯ ಹೆಚ್ಚುತ್ತಲೇ ಹೋಗುತ್ತಿದೆ. ಅದರ ಪ್ರತಿಷ್ಠೆ ದೇಶದ ಗಡಿ ದಾಟಿ ಇನ್ನಷ್ಟು ಮತ್ತಷ್ಟು  ಬೆಳಗುತ್ತಲೇ ಇದೆ. 

ಇದೇ ಮೇ 23ರಂದು ಲಂಡನ್ನಲ್ಲಿ ಟಿಪ್ಪುವಿಗೆ ಸೇರಿದ್ದ ಖಡ್ಗ 145 ಕೋಟಿ ರೂ.ಗೆ ಹರಾಜಾಗಿದೆ. ಇದು ಭಾರತೀಯ ಮತ್ತು ಇಸ್ಲಾಮಿಕ್ ವಸ್ತುವಿಗೆ ಸಂಬಂಧಿಸಿದಂತೆ ಹೊಸ ಹರಾಜು ವಿಶ್ವ ದಾಖಲೆ ಎಂದು ಹರಾಜು ಸಂಸ್ಥೆ ಬೊನ್ಹಾಮ್ಸ್ ನೀಡಿರುವ ಪ್ರಕಟಣೆಯಲ್ಲಿ ಹೇಳಿದೆ.

ಈ ಪ್ರತಿಷ್ಠಿತ ಖಡ್ಗ ಈ ಮುಂಚೆ ವಿಜಯ ಮಲ್ಯ ಒಡೆತನದಲ್ಲಿತ್ತು. ಬ್ರಿಟಿಷ್ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪುಖಡ್ಗವನ್ನು 2004ರಲ್ಲಿ ವಿಜಯ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು.

2004ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಲ್ಯ, ಆಗ ಪ್ರಚಾರದ ತಂತ್ರವಾಗಿ ತಾವು ಟಿಪ್ಪುಖಡ್ಗ ಖರೀದಿಸಿದ್ದ ವಿಚಾರವನ್ನು ಬಳಸಿಕೊಂಡಿದ್ದರು. ಆದರೆ ಚುನಾವಣಾ ರಾಜಕೀಯ ಅವರಿಗೆ ಆಗಿಬರದೆ ಸೋಲು ಅನುಭವಿಸಿದ್ದರು.

ಅದೇ ವಿಶಿಷ್ಟ ಖಡ್ಗ ಈಗ ಮತ್ತೊಮ್ಮೆ ಹರಾಜಿನಲ್ಲಿ 145 ಕೋಟಿ ರೂ.ಗೆ ಮಾರಾಟವಾಗಿದೆ. ಆಗ ಒಂದೂವರೆ ಕೋಟಿಗೆ ಮಾರಾಟವಾಗಿದ್ದ ಖಡ್ಗವನ್ನು ಈಗ ಅದರ ಹಲವು ಪಟ್ಟು ಹೆಚ್ಚು ಬೆಲೆಗೆ ಖರೀದಿಸಲಾಗಿದೆ. ಚಾರಿತ್ರಿಕ ಹಿನ್ನೆಲೆಯ ಟಿಪ್ಪುಖಡ್ಗವನ್ನು ಅನಾಮಧೇಯ ವ್ಯಕ್ತಿಯ ಪರವಾಗಿ ಬೊನ್ಹಾಮ್ಸ್ ಹರಾಜು ಸಂಸ್ಥೆ ಖರೀದಿಸಿದೆ.

ಆದರೆ ಖಡ್ಗ ಖರೀದಿದಾರರ ಮಾಹಿತಿ ಹಂಚಿಕೊಳ್ಳಲು ಬೊನ್ಹಾಮ್ಸ್ ನಿರಾಕರಿಸಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗ ಮಾರಿದವರು, ತೆಗೆದುಕೊಂಡವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಮಲ್ಯ ಖರೀದಿಸಿದ ಟಿಪ್ಪುವಿನ ಖಡ್ಗ ಮತ್ತು ಮಂಗಳವಾರ ಹರಾಜಿಗಿಟ್ಟ ಖಡ್ಗದಲ್ಲಿ ಒಂದೇ ರೀತಿಯ ಬರಹವಿದೆ. ಖಡ್ಗದ ಮೇಲೆ ‘ಶಂಶೀರ್-ಇ-ಮಲಿಕ್’ ಎಂದು ಕೆತ್ತಲಾಗಿದೆ. ಅಂದರೆ ರಾಜನ ಖಡ್ಗ ಎಂದು ಅರ್ಥ.

ಟಿಪ್ಪುವಿನ ಈ ಖಡ್ಗಕ್ಕೆ ಅಸಾಮಾನ್ಯ ಇತಿಹಾಸವಿದೆ. ಬೆರಗುಗೊಳಿಸುವ ಅದರ ವಿನ್ಯಾಸ ಅದನ್ನು ಸಿದ್ಧಪಡಿಸಿದವರ ಅಪ್ರತಿಮ ಕರಕುಶಲತೆಯನ್ನು ಸಾರಿಹೇಳುವ ಹಾಗಿದೆ ಎಂದು ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಆರ್ಟ್ ಮುಖ್ಯಸ್ಥೆ ನೀಮಾ ಸಘಾರ್ಚಿ ಹೇಳಿದ್ದಾರೆ. 

ಈ ಅದ್ಭುತ ಖಡ್ಗ ಟಿಪ್ಪುಸುಲ್ತಾನನಿಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿಯೇ ಶ್ರೇಷ್ಠವಾಗಿದೆ. ಟಿಪ್ಪುವಿನ ಪಾಲಿಗೆ ಅತ್ಯಂತ ನಿಕಟವಾಗಿತ್ತು ಎಂದು ಬಣ್ಣಿಸಲಾಗುತ್ತದೆ. ಟಿಪ್ಪುತನ್ನ ಮಲಗುವ ಕೋಣೆಯಲ್ಲಿ ತನ್ನ ಪಕ್ಕದಲ್ಲೇ ಈ ವಿಶೇಷ ಖಡ್ಗವನ್ನು ಹಾಗೂ ಎರಡು ಪಿಸ್ತೂಲುಗಳನ್ನು ಇಟ್ಟುಕೊಂಡಿರುತ್ತಿದ್ದ ಎಂದು ಇತಿಹಾಸವಿದೆ. 

ಇದು ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರಿಗೆ ಸಿಕ್ಕಿದ ಖಡ್ಗ. ಟಿಪ್ಪುವಿನ ಮಲಗುವ ಕೋಣೆಯಲ್ಲಿದ್ದ ಈ ಖಡ್ಗವನ್ನು ಮೇ 4, 1799ರಲ್ಲಿ ತೆಗೆದುಕೊಂಡು ಹೋಗಿದ್ದ ಬ್ರಿಟಿಷ್ ಸೇನೆ ಮೇಜರ್ ಜನರಲ್ ಬೈಯರ್ಡ್ಗೆ ನೀಡಿತ್ತು.

ಟಿಪ್ಪುಶ್ರೀರಂಗಪಟ್ಟಣದ ಮೇಲೆ ಹಿಡಿತ ಕಳೆದುಕೊಂಡ ನಂತರ ನಡೆದ ಈಸ್ಟ್ ಇಂಡಿಯಾ ಕಂಪೆನಿ ನಡೆಸಿದ ಯುದ್ಧದ ನೇತೃತ್ವವನ್ನು ಬೈಯರ್ಡ್ ವಹಿಸಿದ್ದ. ಯುದ್ಧದಲ್ಲಿ ಟಿಪ್ಪುಮರಣ ಹೊಂದಿದಾಗ ಅರಮನೆಯಿಂದ ವಶಪಡಿಸಿಕೊಂಡ ಖಡ್ಗವನ್ನು ಸೇನೆ ಬೈಯರ್ಡ್ಗೆ ಒಪ್ಪಿಸಿತ್ತು. ಬಳಿಕ ಮಲ್ಯ ಒಡೆತನಕ್ಕೆ ಬರುವವರೆಗೂ ಈ ಖಡ್ಗ ಹಲವರ ಕೈಸೇರಿತ್ತು. ಈಗ ದಾಖಲೆಯ ಹರಾಜಿನೊಂದಿಗೆ ಮತ್ತೊಬ್ಬರ ಪಾಲಾಗಿದೆ.

ಟಿಪ್ಪುಕುರಿತ ನಿಜವಾದ ಚರಿತ್ರೆಯನ್ನು ಮರೆಮಾಚುವುದಕ್ಕೆ ಶತಪ್ರಯತ್ನ ನಡೆಸುತ್ತಲೇ ಬಂದಿರುವ ಸಂಘಪರಿವಾರ ಮೊನ್ನೆಮೊನ್ನೆ ಹುಟ್ಟುಹಾಕಿದ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳವರೆಗೂ ತಮ್ಮ ಕಟ್ಟುಕಥೆ ಮುಂದುವರಿಸಿದ್ದನ್ನು ನೋಡಿದ್ದೇವೆ.

ಜನರಲ್ಲಿ ಕೋಮು ಹೆಸರಿನಲ್ಲಿ ದ್ವೇಷ ಬಿತ್ತಬೇಕೆನ್ನುವವರು ಟಿಪ್ಪು ಕುರಿತ ಇತಿಹಾಸ ತಿರುಚುತ್ತಲೇ ಬಂದಿದ್ದಾರೆ. ಆತ ಮಾಡಿದ ಜನಕಲ್ಯಾಣದ ಯಾವ ವಿಚಾರವನ್ನೂ ಹೇಳಲಾರರು ಇವರು. ಆದರೆ ಸತ್ಯ ಎಂದಾದರೂ ಪ್ರಜ್ವಲಿಸಲೇಬೇಕು. ಅದನ್ನು ಅಡಗಿಸಲು ಸಾಧ್ಯವಿಲ್ಲ.

ಉರಿ ಹಾಗೂ ನಂಜಿನಿಂದ ರಾಜಕೀಯ ಮಾಡಿ ಸತ್ಯದ ಸದ್ದಡಗಿಸಿಬಿಡುತ್ತೇವೆ ಎಂದುಕೊಂಡವರ ಸದ್ದನ್ನು ಈ ಬಾರಿ ಕನ್ನಡಿಗರೇ ಅಡಗಿಸಿದ್ದಾರೆ. ಅವರ ಆಟಗಳೆಲ್ಲವೂ ನಕಲಿ ಎಂದು ಅಲ್ಪಕಾಲದಲ್ಲೇ ಎಲ್ಲರೆದುರು ಬಯಲಾಯಿತು. ಸುಳ್ಳನ್ನೇ ಇಟ್ಟುಕೊಂಡು ಸುಳ್ಳು ಸಿನೆಮಾ ಮಾಡಲು ಹೊರಟವರ ಮಾನ ಎಲ್ಲರೆದುರು ಹರಾಜಾಯಿತು.

ಅದೇ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಮತ್ತೆ ಜಾಗತಿಕವಾಗಿ ಸುದ್ದಿಯಾಗಿದ್ದಾನೆ. ಮತ್ತೊಮ್ಮೆ ಅವನ ಹೆಸರು, ಶೌರ್ಯ, ಇತಿಹಾಸ ಅಂತರ್ರಾಷ್ಟ್ರೀಯವಾಗಿ ಚರ್ಚೆಯಾಗುತ್ತಿದೆ. ಎರಡು ಶತಮಾನಗಳ ಬಳಿಕವೂ ಟಿಪ್ಪುವಿನ ಖ್ಯಾತಿ ಹಳತಾಗಿಲ್ಲ, ಅದು ದಿನದಿಂದ ದಿನಕ್ಕೆ ಇನ್ನಷ್ಟು ಮೆರುಗು ಪಡೆದು ಮಿಂಚುತ್ತಲೇ ಇದೆ. ಸತ್ಯವನ್ನು ಅದೆಷ್ಟು ಕಾಲ ಮುಚ್ಚಿಡಬಹುದು, ಅಲ್ಲವೆ?

Similar News