ಫಾಝಿಲ್, ಮಸೂದ್, ಜಲೀಲ್, ಸಮೀರ್ ಹಾಗೂ ಕಾಂಗ್ರೆಸ್ ನಾಯಕರ ಆಘಾತಕಾರಿ ಮರೆವು

Update: 2023-05-28 05:50 GMT

ಮತೀಯ ಕಾರಣಕ್ಕೆ ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹೆಂಡತಿಗೆ ಬಿಜೆಪಿ ಸರಕಾರ ಕೊಡಮಾಡಿದ ತಾತ್ಕಾಲಿಕ ನೆಲೆಯ ಗುತ್ತಿಗೆ ಉದ್ಯೋಗ ನಿಯಮದಂತೆ ರದ್ದಾದ ಪ್ರಕರಣ ರಾಜಕೀಯ, ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಬಿಜೆಪಿ, ಕಾಂಗ್ರೆಸ್ ಮಧ್ಯೆ ಕೆಸರೆರಾಚಾಟವೂ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಪಕ್ಷಾತೀತವಾಗಿ ನೆಟ್ಟಾರು ಪತ್ನಿಗೆ ಅನುಕಂಪದ ಮಹಾಪೂರ ಹರಿದಿದೆ.  ಕಾಂಗ್ರೆಸ್ ನಾಯಕರುಗಳೂ, ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಲೇ ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗವನ್ನು ಮರಳಿ ಕೊಡಿಸುವ ಆಶ್ವಾಸನೆಯನ್ನೂ ಸರಣಿಯಾಗಿ ನೀಡಿದ್ದಾರೆ. ಇದೆಲ್ಲದರ ಪರಿಣಾಮ, ಸಂಜೆಯಾಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಸ್ವತಹ ಟ್ವೀಟ್ ಮಾಡಿ ಪ್ರವೀಣ್ ಪತ್ನಿ ನೂತನ ಕುಮಾರಿಯವರನ್ನು ಗುತ್ತಿಗೆ ಆಧಾರದಲ್ಲಿ ಕಾಂಗ್ರೆಸ್ ಸರಕಾರ ಮರು ನೇಮಕ ಮಾಡಿಕೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ. ಅಲ್ಲಿಗೆ ಎಲ್ಲವೂ ಸುಖಾಂತ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶಂಸೆಯ ಮಹಾ ಪೂರ.

ಪ್ರವೀಣ್ ನೆಟ್ಟಾರು ವಿಧವೆ ಪತ್ನಿಯ ಪರವಾಗಿ ನಿಂತು, ಬಿಜೆಪಿ‌ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿ ನೂತನ ಕುಮಾರಿಯವರಿಗೆ ಉದ್ಯೋಗವನ್ನು ಮರಳಿಕೊಡಿಸಲು ಯಶಸ್ವಿಯಾದ ಕಾಂಗ್ರೆಸ್ ನಾಯಕರು, ಬೆಂಬಲಿಗರು, ಪ್ರವೀಣ್ ನೆಟ್ಟಾರು ಕೊಲೆಯ ಹಿಂದೆ, ಮುಂದೆ ಅದೇ ರೀತಿಯ ಮತೀಯ ದ್ವೇಷಕ್ಕೆ ಕೊಲೆಯಾದ ಬೆಳ್ಳಾರೆಯ ಮಸೂದ್, ಸುರತ್ಕಲ್ ನ ಫಾಝಿಲ್, ಜಲೀಲ್ ರ ಕುಟುಂಬಗಳನ್ನು ನೆನಪಿಸಿಕೊಳ್ಳಲಿಲ್ಲ ಎಂಬುದು ನನಗೆ ಆಶ್ಚರ್ಯ ಉಂಟು ಮಾಡದಿದ್ದರೂ, ಆಘಾತವನ್ನಂತು ಉಂಟು ಮಾಡಿತು. 

ಬೆಳ್ಳಾರೆಯ ಹದಿಹರೆಯದ ಮುಸ್ಲಿಂ ಯುವಕ ಮಸೂದ್ ಯಾವುದೇ ರಾಜಕೀಯ ಪಕ್ಷ, ಸಂಘಟನೆಯ ಸದಸ್ಯನಾಗಿರಲಿಲ್ಲ. ಮತೀಯ ದ್ವೇಷದ ಕಾರಣಕ್ಕೆ ಕೊಲೆಯಾದ. ಈತ ತನ್ನ ವಿಧವೆ ತಾಯಿಗೆ ಒಬ್ಬನೆ ಮಗನಾಗಿದ್ದ. ಈ ಕೊಲೆಯಾಗಿ ವಾರಗಳ ತರುವಾಯ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (ಪ್ರತೀಕಾರ) ಕೊಲೆಯಾಯ್ತು. ಆಕ್ರೋಶಿತ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ಸರಕಾರ, ನಾಯಕರ ವಿರುದ್ದ ತಿರುಗಿ ಬಿದ್ದರು. ಆ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ನೆಟ್ಟಾರು ಕುಟಂಬಕ್ಕೆ ಸಾಂತ್ವನ ಹೇಳಲು ಬೆಳ್ಳಾರೆಗೆ ಆಗಮಿಸಿದರು. ಸರಕಾರದ ವತಿಯಿಂದ ನೆಟ್ಟಾರು ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಅಲ್ಲೆ ಕೂಗಳತೆಯ ದೂರದಲ್ಲಿದ್ದ ಅನಾಥೆಯಾಗಿದ್ದ ಮಸೂದ್ ನ ವಿಧವೆ ತಾಯಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅದಾಗಿ ಗಂಟೆಗಳ ತರುವಾಯ  ಸುರತ್ಕಲ್ ನಲ್ಲಿ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ನನ್ನು ನೆಟ್ಟಾರು ಕೊಲೆಗೆ ಪ್ರತಿಯಾಗಿ ನಡುಬೀದಿಯಲ್ಲಿ ಹತ್ಯೆ ಮಾಡಲಾಯಿತು. ಫಾಝಿಲ್ ಕುಟುಂಬಕ್ಕೂ ಬಿಜೆಪಿ ಸರಕಾರ ನಯಾಪೈಸೆ ಪರಿಹಾರ ನೀಡಲಿಲ್ಲ. ಈ ಕೊಲೆಗಳಾಗಿ ತಿಂಗಳುಗಳ ತರುವಾಯ ಜಲೀಲ್ ಎಂಬ ಅಂಗಡಿ ವ್ಯಾಪಾರಿಯನ್ನು ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಮತೀಯ ದ್ವೇಷದಿಂದ ಹತ್ಯೆ ಮಾಡಲಾಯಿತು. ಈತನ ಮಡದಿ, ಪುಟಾಣಿ ಮಗು ಅನಾಥವಾಯ್ತು. ಬಿಜೆಪಿ ಸರಕಾರ ಪರಿಹಾರ ಧನ ನೀಡಲಿಲ್ಲ. ಕೊಲೆಗೀಡಾದ ಮೂರು ಜನ ಅಮಾಯಕ ಮುಸ್ಲಿಮರ ಕುಟುಂಬಗಳಿಗೆ ಪರಿಹಾರವೂ ದೊರಕಲಿಲ್ಲ. ಬಿಜೆಪಿ ಸ್ಥಳೀಯ ಶಾಸಕರುಗಳು ಸಂತ್ರಸ್ತ ಕುಟುಂಬಗಳಿಗೆ ಕನಿಷ್ಟ ಸಾಂತ್ವನದ ಮಾತುಗಳನ್ನೂ ಹೇಳಲಿಲ್ಲ.ಅದರ ಬದಲಾಗಿ ಆ ನತದೃಷ್ಟ ಕುಟುಂಬಗಳನ್ನು ಅವಮಾನಿಸಲಾಯ್ತು.

 ಈ ಕೊಲೆಗಳಿಗೆ ಪೂರ್ವದಲ್ಲಿ ಗದಗ ಜಿಲ್ಲೆಯ ನರಗುಂದದಲ್ಲಿ ಸಮೀರ್ ಎಂಬ ಅಮಾಯಕ ಮುಸ್ಲಿಂ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಮತೀಯ ದ್ವೇಷದಿಂದ ಕೊಲೆಗೈದಿದ್ದರು. ಆ ಕುಟುಂಬಕ್ಕೂ ನ್ಯಾಯಯುತವಾಗಿದ್ದ ಪರಿಹಾರವೂ ದೊರಕಲಿಲ್ಲ. ಸಾಂತ್ವನವೂ ದೊರಕಲಿಲ್ಲ. ಆದರೆ, ಅದೇ ಅವಧಿಯಲ್ಲಿ ಮತೀಯ ದ್ವೇಷಕ್ಕೆ ಬಲಿಯಾದ ಬಜರಂಗ ದಳದ ಕಾರ್ಯಕರ್ತ ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಸರಕಾರವೆ 30 ಲಕ್ಷ ರೂಪಾಯಿ ಪರಿಹಾರ ಒದಗಿಸಿತು. ಅದಲ್ಲದೆ ಪಕ್ಷದ ವತಿಯಿಂದ ಅಪಾರ ಮೊತ್ತದ ಪರಿಹಾರ ಧನ ಪ್ರತ್ಯೇಕವಾಗಿ ಶಿವಮೊಗ್ಗ ಹರ್ಷ, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒದಗಿಸಲಾಯಿತು. ಪ್ರವೀಣ್ ನೆಟ್ಟಾರು ಕುಟಂಬಕ್ಕೆ 60 ಲಕ್ಷ ರೂಪಾಯಿ ಮೌಲ್ಯದ (ಬಿಜೆಪಿಯೇ ಘೋಷಿಸಿಕೊಂಡಿದೆ) ಮನೆಯನ್ನು‌ ಕಟ್ಟಿಸಿಕೊಡಲಾಯಿತು. ಅದೇ ಮತೀಯ ದ್ವೇಷದ ಕಾರಣಗಳಿಗೆ ಹತ್ಯೆಗೀಡಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಬಿಜೆಪಿ ಸರಕಾರವೂ ಪರಿಹಾರ ನೀಡಲಿಲ್ಲ, ಬಿಜೆಪಿ ಪಕ್ಷವೂ ಸಹಾಯ ಮಾಡಲಿಲ್ಲ (ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಈ ರೀತಿ ತಾರತಮ್ಯ ಎಸಗುವುದು ನ್ಯಾಯಯುತ ಅಲ್ಲ. ಬಿಜೆಪಿಯೇತರ ಪಕ್ಷಗಳು ಇಂತಹ ತಾರತಮ್ಯ ಎಸಗಿದ್ದರೆ ಅನಾಹುತಗಳೇ ಸಂಭವಿಸುತ್ತಿತ್ತು)

ಈ ಎಲ್ಲಾ ಹಿನ್ನಲೆಯಲ್ಲಿ ಪ್ರವೀಣ್ ನೆಟ್ಟಾರು ವಿಧವೆ ಪತ್ನಿ ನೂತನ ಕುಮಾರಿ ತಾತ್ಕಾಲಿಕ ಉದ್ಯೋಗ ರದ್ದು, ಕಾಂಗ್ರೆಸ್ ಮುಖಂಡರ ಪ್ರತಿಕ್ರಿಯೆ, ಮರು ನೇಮಕವನ್ನು ಗಮನಿಸಬೇಕು. ಕೊಲೆಗಳು ನಡೆದ ಅಂದಿನ ಸಂದರ್ಭ ಪ್ತವೀಣ್ ನೆಟ್ಟಾರು,  ಹರ್ಷ ಕುಟುಂಬಕ್ಕೆ ಸರಕಾರದ ಬೊಕ್ಕಸದಿಂದ ಪರಿಹಾರ ಧನ ಒದಗಿಸಿ, ಕೊಲೆಗೀಡಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಪರಿಹಾರ ಒದಗಿಸದ್ದನ್ನು ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರು ಕಟುವಾಗಿ ಟೀಕಿಸಿದ್ದರು. ಇಂದು ಪವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಪರವಾಗಿ ಧ್ವನಿ ಎತ್ತುವಾಗ ಮಾತ್ರ ಆ ನತದೃಷ್ಟ ಮುಸ್ಲಿಂ ಕುಟುಂಬಗಳನ್ನು ಮರೆತು ಬಿಟ್ಟರು‌. ಕಾಂಗ್ರೆಸ್ ಪಕ್ಷದ ಬಿಲ್ಲವ ಸಮುದಾಯ ಹಿನ್ನಲೆಯ ಮುಖಂಡರಂತೂ ತಾವು ಬಿಲ್ಲವ ಸಮುದಾಯಕ್ಕೆ ಮಾತ್ರ ಸೀಮಿತ ಎಂಬಂತೆ ನಡೆದುಕೊಂಡರು.

ಕಾಂಗ್ರೆಸ್ ಸ್ಥಳೀಯ ಮುಖಂಡರ ನಡವಳಿಕೆ ಏನೇ ಇರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳಬಾರದಿತ್ತು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷವನ್ನು ಮೀರಿದ ಒಂದು ವ್ಯಕ್ತಿತ್ವವಿದೆ‌. ಅಹಿಂದ ನಾಯಕ, ಸಮಾಜವಾದಿ ಎಂಬ ವಿಶೇಷಣಗಳೂ ಅವರಿಗಿದೆ. ರಾಜ್ಯದ ಮುಸ್ಲಿಂ ಸಮುದಾಯ (ಸದ್ಯ ತಬ್ಬಲಿ ಸಮುದಾಯ) ಸಿದ್ದರಾಮಯ್ಯನವರ ಮೇಲೆ ವಿಶೇಷ ನಂಬಿಕೆ ಇಟ್ಟುಕೊಂಡು ಬಂದಿದೆ. ಸಿದ್ದರಾಮಯ್ಯ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಮರು ನೇಮಕಾತಿಯನ್ನು ಟ್ವಿಟರ್ ನಲ್ಲಿ ಪ್ರಕಟಿಸುವಾಗ ಬೆಳ್ಳಾರೆಯ ಮಸೂದ್, ಸುರತ್ಕಲ್ ನ ಫಾಝಿಲ್, ಜಲೀಲ್, ನರಗುಂದದ ಸಮೀರ್ ರ ಕುಟುಂಬಗಳನ್ನೂ ನೆನಪಿಸಿಕೊಳ್ಳಬೇಕಿತ್ತು. ಆ ಕುಟುಂಬಗಳೂ ಸರಕಾರದ ತಾತ್ಕಾಲಿಕ ಗುತ್ತಿಗೆ ನೌಕರಿ ಪಡೆಯಲು ಆಸಕ್ತವಾಗಿದ್ದರೆ ಅವರ ಕುಟುಂಬಗಳ ಪ್ರತಿನಿಧಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು, ಬಿಜೆಪಿ‌  ಸರಕಾರ ನೀಡದೆ ಬಾಕಿ ಉಳಿಸಿರುವ ನ್ಯಾಯಯುತ ಪರಿಹಾರ ಧನ ಮತೀಯ ದ್ವೇಷಕ್ಕೆ ಕೊಲೆಯಾದ  ನಾಲ್ಕೂ ಜನರ ಸಂತ್ರಸ್ತ ಕುಟುಂಬಗಳಿಗೆ ವಿತರಿಸಿ ತಾರತಮ್ಯವನ್ನು ಸರಿಪಡಿಸಲಾಗುವುದು, ಸರಕಾರಕ್ಕೆ ಪ್ರಜೆಗಳಾಗಿ ಎಲ್ಲರೂ ಒಂದೆ. ರಾಜಧರ್ಮ ಪಾಲಿಸಲಾಗುವುದು ಎಂದು ಪ್ರಕಟಿಸಬೇಕಿತ್ತು‌. ಅದು ಸರಿಯಾದ ನಡೆಯಾಗುತ್ತಿತ್ತು. ಸಿದ್ದರಾಮಯ್ಯ ಮತ್ತಷ್ಟು ಎತ್ತರಕ್ಕೆ ಏರುತ್ತಿದ್ದರು‌. ಹಾಗಾಗಲಿಲ್ಲ‌. ಇದು ಖೇದಕರ. ಈಗಲಾದರು ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕು. ಆಗಿರುವ ಅನ್ಯಾಯಗಳ‌ನ್ನು ಸರಿಪಡಿಸಿಕೊಳ್ಳಬೇಕು. ಸಿದ್ದರಾಮಯ್ಯರ ಜೊತೆಗಿರುವ ಪ್ರಜಾಪ್ರಭುತ್ವವಾದಿಗಳು ಅವರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಬೇಕು. ಇದು ಲಾಭನಷ್ಟದ ಪ್ರಶ್ನೆಯಲ್ಲ‌‌. ಗಾಯಗಳು ಮಾಯಬೇಕೆಂದರೆ ಸರಿಯಾದ ಔಷಧಿ ಹಾಕಬೇಕು.‌ಗಾಯ ಆಗಿರುವುದು ಮಕ್ಕಳ‌ನ್ನು ಕಳೆದುಕೊಂಡು ತಾರತಮ್ಯಕ್ಕೊಳಗಾಗಿರುವ ಆ ನಾಲ್ಕು ಮುಸ್ಲಿಂ ಕುಟುಂಬಕ್ಕೊ,  ಮುಸ್ಲಿಂ ಸಮುದಾಯಕ್ಕೊ ಮಾತ್ರ ಅಲ್ಲ‌. ಗಾಯ ಆಗಿರುವುದು ನಮ್ಮ ಸಮಾಜಕ್ಕೆ, ಈ ವ್ಯವಸ್ಥೆಗೆ. ಇಷ್ಟು ಅರ್ಥ ಆದರೆ ಸಾಕು. 

ನಾವಂತೂ ಬಿಜೆಪಿ ಸರಕಾರದ ಅವಧಿಯಲ್ಲೂ ಈ ತಾರತಮ್ಯದ ವಿರುದ್ದ ಧ್ವನಿ ಎತ್ತಿದ್ದೇವೆ. ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ನೆನಪಿಸುತ್ತಿದ್ದೇವೆ. ತಾರತಮ್ಯ ಸರಿಪಡಿಸುವವರಗೆ ಧ್ವನಿಯನ್ನು ಇ‌ನ್ನೂ ಪ್ರಬಲವಾಗಿಸುತ್ತೇವೆ. ನಾವು ಅಂದರೆ ಮುಸ್ಲಿಮರು, ಹಿಂದುಗಳು, ಕ್ರೈಸ್ತರು ಸೇರಿದಂತೆ‌ ಮನುಷ್ಯಾರಾಗಿ ಇರುವವರು. ಮನುಷ್ಯರಾದವರು ಧ್ನನಿ ಎತ್ತಿಯೇ ತೀರುತ್ತಾರೆ. ಕಾಂಗ್ರೆಸ್ ಸರಕಾರ, ಪಕ್ಷ ಅರ್ಥಮಾಡಿಕೊಳ್ಳಲಿ.

ಮುನೀರ್ ಕಾಟಿಪಳ್ಳ

Similar News