ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

Update: 2023-05-28 05:50 GMT

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಸಂಸತ್ ಭವನ ಉದ್ಘಾಟಿಸಬೇಕು ಎಂದು ಆಗ್ರಹಿಸಿ ನೂತನ ಸಂಸತ್ ಭವನ ಉದ್ಘಾಟನೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣ ಫಲಕವನ್ನು ಅನಾವರಣಗೊಳಿಸುವ ಮೂಲಕ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು.

ಬೆಳಗ್ಗೆ 7.30ಕ್ಕೆ ನೂತನ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ನಂತರ ಸಂಸತ್ ಸಭಾಧ್ಯಕ್ಷ ಓಂ ಬಿರ್ಲಾ ಅವರೊಂದಿಗೆ ಪೂಜೆಗೆ ಕುಳಿತರು.

ಈ ಕಾರ್ಯಕ್ರಮದಲ್ಲಿ ಅಧೀನಂ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಗೆ ಸೆಂಗೋಲ್ ಅನ್ನು ಹಸ್ತಾಂತರಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ರಾಜದಂಡವನ್ನು ಲೋಕಸಭಾ ಸಭಾಂಗಣದೊಳಗೆ ಕೊಂಡೊಯ್ದು, ಅದನ್ನು ಲೋಕಸಭಾಧ್ಯಕ್ಷದ ಪೀಠದ ಬದಿಯಲ್ಲಿ ಪ್ರತಿಷ್ಠಾಪಿಸಿದರು.

ಇದಾದ ನಂತರ ಭವ್ಯ ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿದ್ದ  ಕಾರ್ಮಿಕರ ಗುಂಪನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು.

ಆ ಬಳಿಕ ಹಲವಾರು ಧಾರ್ಮಿಕ ಪ್ರತಿನಿಧಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು.

ನೂತನ ಸಂಸತ್ ಭವನದ ಲೋಕಸಭಾ ಸಭಾಂಗಣದಲ್ಲಿ 888 ಸದಸ್ಯರು ಆಸೀನರಾಗಲು ಸ್ಥಳಾವಕಾಶವಿದ್ದು, ರಾಜ್ಯಸಭಾ ಸಭಾಂಗಣದಲ್ಲಿ 300 ಸದಸ್ಯರು ಆಸೀನರಾಗಬಹುದಾಗಿದೆ. ಜಂಟಿಯಾಗಿ ಆಸೀನರಾಗಲು ಲೋಕಸಭೆಯ ಸಭಾಂಗಣದಲ್ಲಿ 1,280 ಸಂಸದರಿಗೆ ಸ್ಥಳಾವಕಾಶ ಒದಗಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ನೂತನ ಸಂಸತ್ ಭವನ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಬಳಸಲಾಗಿದೆ. ಮಹಾರಾಷ್ಟ್ರದ ನಾಗಪುರದಿಂದ ತೇಗದ ಮರವನ್ನು ತಂದಿದ್ದರೆ, ಕೆಂಪು ಹಾಗೂ ಬಿಳಿ ಮರಳುಕಂಭವನ್ನು ರಾಜಸ್ಥಾನದ ಸಾರಾಮಥುರಾದಿಂದ ತರಲಾಗಿದೆ.

ಉತ್ತರಪ್ರದೇಶದ ಮಿರ್ಝಾಪುರದಿಂದ ನೆಲಹಾಸನ್ನು ತರಲಾಗಿದ್ದರೆ, ತ್ರಿಪುರಾದಿಂದ ಬೊಂಬಿನ ನೆಲ ಹಾಗೂ ರಾಜಸ್ಥಾನದಿಂದ ಕಲ್ಲಿನ ಕೆತ್ತನೆ ಮಾಡಿಸಲಾಗಿದ್ದು, ನೂತನ ಸಂಸತ್ ಭವನವು ಭಾರತದ ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಈ ಐತಿಹಾಸಿಕ ಕ್ಷಣದ ಸ್ಮರಣಾರ್ಥ ಕೇಂದ್ರ ಸರ್ಕಾರವು ರೂ. 75 ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದೆ.

ನೂತನ ಸಂಸತ್ ಭವನವನ್ಮು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸಿದ್ದು, ಭಾರತದ ಪ್ರಜಾಸತ್ತಾತ್ಮಕ ಪರಂಪರೆಯನ್ನು ಬಿಂಬಿಸುವ ಭವ್ಯ ಸಾಂವಿಧಾನಿಕ ಸಭಾಂಗಣ, ಸಂಸದರಿಗೆ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಹಲವಾರು ಸಮಿತಿಗಳ ಕೊಠಡಿಗಳು, ಭೋಜನಾಲಯ ಹಾಗೂ ವಿಶಾಲ ತಂಗುದಾಣ ಪ್ರದೇಶವನ್ನು ಹೊಂದಿದೆ.

ತ್ರಿಭುಜಾಕೃತಿಯ ನಾಲ್ಕು ಅಂತಸ್ತಿನ ನೂತನ ಸಂಸತ್ ಭವನವನ್ನು 64,500 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದು, ಗ್ಯಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಇದಲ್ಲದೆ ಗಣ್ಯ ಹಾಗೂ ಅತಿ ಗಣ್ಯ ಅತಿಥಿಗಳ ಪ್ರವೇಶಕ್ಕಾಗಿ ಪ್ರತ್ಯೇಕ ದ್ವಾರವನ್ನು ನಿರ್ಮಿಸಲಾಗಿದೆ.

Similar News