ಅಪಾಯ ಲೆಕ್ಕಿಸದೆ ಸಮುದ್ರದಲ್ಲಿ ಈಜು: ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಆಗ್ರಹ

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

Update: 2023-05-28 15:09 GMT

ಉಡುಪಿ: ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಹಾಗೂ ವಾರಾಂತ್ಯದಲ್ಲಿ ಸಮಯ ಕಳೆಯಲು ಪ್ರವಾಸಿಗರ ದಂಡೇ ಮಲ್ಪೆ ಬೀಚ್‌ಗೆ ಆಗಮಿಸುತ್ತಿದ್ದು, ರವಿವಾರ ಪ್ರವಾಸಿಗರೇ ದಂಡೇ ಬೀಚ್‌ನಲ್ಲಿ ಜಮಾಯಿಸಿದೆ. ಈ ಮಧ್ಯೆ ಕೆಲವು ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೆ ಸಮುದ್ರದಲ್ಲಿ ಈಜುತ್ತಿರುವುದು ಕಂಡು ಬರುತ್ತಿದೆ.

ಹವಾಮಾನ ವೈಪರೀತ್ಯ ಹಾಗೂ ಮಳೆಗಾಳಿಯ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷಿತೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್, ಸೀವಾಕ್‌ನಲ್ಲಿ ಪ್ರವಾಸಿ ಬೋಟು ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವು ಪ್ರವಾಸಿ ಬೋಟು ಚಟುವಟಿಕೆ ಗಳನ್ನು ಮೇ 16ರಿಂದ ಮಲ್ಪೆ ಅಭಿವೃದ್ಧಿ ಸಮಿತಿಯು ಸ್ಥಗಿತಗೊಳಿಸಲಾಗಿದೆ.

ಆದರೆ ಜೂನ್ ತಿಂಗಳಿನಿಂದ ಶಾಲಾ ಕಾಲೇಜು ಆರಂಭಗೊಳ್ಳಲಿರುವುದ ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಹಳಷ್ಟು ಮಂದಿ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಇವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು ಇರುತ್ತದೆ. ಇವರನ್ನು ನಿಯಂತ್ರಿಸುವುದು ಜೀವರಕ್ಷಕ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.

ವಾರದಲ್ಲಿ ಎರಡನೇ ಅವಘಡ

ಮಲ್ಪೆ ಬೀಚ್‌ನ ಸಮುದ್ರದಲ್ಲಿ ಆಡುತ್ತಿದ್ದ ಯುವಕ ನೋರ್ವ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕಳೆದ ರವಿವಾರ ಕೂಡ ಬೀಚ್‌ನ ಸಮುದ್ರದಲ್ಲಿ ಮುಳುಗಿ ಪ್ರವಾಸಿ ಗರೊಬ್ಬರು ಮೃತಪಟ್ಟಿದ್ದರು. ಇದು ಎರಡನೇ ಅವಘಡ.

ನಾಲ್ವರು ಪ್ರವಾಸಿದರು ಬೆಂಗಳೂರಿನಿಂದ ಉಡುಪಿಗೆ ಮೇ 26ಕ್ಕೆ ಬಂದಿದ್ದು, ಶನಿವಾರ ಬೆಳಗ್ಗೆ ಆರು ಮಂದಿ ಮಲ್ಪೆ ಬೀಚ್‌ನ ಸಮುದ್ರದಲ್ಲಿ ಆಡುತ್ತಿದ್ದರು. ಈ ವೇಳೆ ಸಚಿನ್(25) ಎಂಬವರು ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಕೊಂಡು ಹೋದರೆನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ಹುಡುಕಾಟ ನಡೆಸಿದರೂ ಸಚಿನ್ ಪತ್ತೆಯಾಗಿರಲಿಲ್ಲ. ಸುಮಾರು 30 ಗಂಟೆಗಳ ಬಳಿಕ ನೀರಿನಿಂದ ಮೇಲೆ ಬಂದ ಸಚಿನ್ ಅವರನ್ನು ಮೇಲಕ್ಕೆ ಎತ್ತಿ ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರವಾಗಿ ಅಸ್ವಸ್ಥಗೊಂಡ ಸಚಿನ್ ಎಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮುದ್ರಕ್ಕೆ ಇಳಿಯದಂತೆ ಕ್ರಮ

ಮಲ್ಪೆ ಬೀಚಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಸಾಕಷ್ಟು ಅಧಿಕವಾಗಿರುತ್ತದೆ. ಇದೀಗ ಹವಾಮಾನದಲ್ಲಿ ಏರುಪೇರು ಆಗುತ್ತಿರುವುದರಿಂದ ಸಮುದ್ರದ ಅಲೆಗಳ ಸೆಳೆತ ಮತ್ತು ಅಬ್ಬರ ಕೂಡ ಜಾಸ್ತಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ನೀರಿನಲ್ಲಿ ಮುಳುಗಿ ಅಪಾಯ ತಂದೊಡ್ಡುತ್ತಿರುವ ಘಟನೆಗಳು ಕೂಡ ಮಲ್ಪೆ ಬೀಚ್‌ನಲ್ಲಿ ನಡೆಯು ತ್ತಿದೆ. ಆದುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಪ್ರವಾಸಿ ಗರು ನೀರಿಗೆ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಜೀವ ರಕ್ಷಕ ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.

ಬೀಚ್‌ನಲ್ಲಿ ಒಂದು ವಾರದಲ್ಲಿ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ, ಜೀವರಕ್ಷಕರ, ಪೊಲೀಸರ ಹಾಗೂ ಕರಾವಳಿ ಕಾವಲು ಪೊಲೀಸರ ಮಾತುಗಳನ್ನು ಕೇಳುತ್ತಿಲ್ಲ. ಅವರ ಮಾತನ್ನು ಧಿಕ್ಕರಿಸಿ ನೀರಿಗೆ ಇಳಿಯುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.

Similar News