‘ಮಹಿಳಾ ಮಹಾ ಪಂಚಾಯತ್’ನಲ್ಲಿ ಭಾಗವಹಿಸದಂತೆ ತಡೆ: ಜೆಎನ್‌ಯು ವಿದ್ಯಾರ್ಥಿಗಳ ಗುಂಪು ಆರೋಪ

Update: 2023-05-28 17:16 GMT

ಹೊಸದಿಲ್ಲಿ: ಜವಾಹರ್ ನೆಹರೂ ವಿಶ್ವವಿದ್ಯಾನಿಲಯ (JNU)ದ ಆಡಳಿತ ಮಂಡಳಿ ಕ್ಯಾಂಪಸ್‌ನಲ್ಲಿ ಭದ್ರತೆ ಹೆಚ್ಚಿಸುವ ಮೂಲಕ ‘‘ಮಹಿಳಾ ಮಹಾ ಪಂಚಾಯತ್’’ನಲ್ಲಿ ಪಾಲ್ಗೊಳ್ಳದಂತೆ ತಡೆ ಒಡ್ಡಿದೆ ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪೊಂದು ರವಿವಾರ ಆರೋಪಿಸಿದೆ.

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಜಂತರಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ‘‘ಮಹಾ ಪಂಚಾಯತ್’’ಗೆ ಕರೆ ನೀಡಲಾಗಿತ್ತು. ಕ್ಯಾಂಪಸ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಅಘೋಷಿತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು ಎಂದು ಅಖಿಲ ಭಾರತ ವಿದ್ಯಾರ್ಥಿಗಳ ಅಸೋಶಿಯೇಷನ್(AISA) ಪ್ರತಿಪಾದಿಸಿದೆ.

‘‘ಇಂದು ಮಹಿಳಾ ಪಂಚಾಯತ್ ಘೋಷಿಸಲಾಗಿತ್ತು. ಇದರಲ್ಲಿ ಭಾಗವಹಿಸದಂತೆ ವಿದ್ಯಾರ್ಥಿಗಳನ್ನು ತಡೆಯಲು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ  ಕ್ಯಾಂಪಸ್‌ನ ಒಳಗೆ ಹಾಗೂ ಹೊರಗೆ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು’’ ಎಂದು ಎಐಎಸ್‌ಎಯ ಕಾರ್ಯಕರ್ತೆ ಮಧುರಿಮಾ ಕುಂದು ತಿಳಿಸಿದ್ದಾರೆ.

ಕ್ಯಾಂಪಸ್‌ನಲ್ಲಿ 6ಕ್ಕೂ ಅಧಿಕ ಮಹಿಳಾ ಪೊಲೀಸ್ ಸಿಬ್ಬಂದಿ ಇರುವ ಫೋಟೊವನ್ನು ಕುಂದು ಹಂಚಿಕೊಂಡಿದ್ದಾರೆ. ತಾನು ಮುಖ್ಯ ಗೇಟ್‌ನಿಂದ ಹೊರಗೆ ಕಾಲಿಟ್ಟ ಕೂಡಲೇ ತಡೆ ಒಡ್ಡಲಾಯಿತು ಎಂದು ಕುಂದು ಆರೋಪಿಸಿದ್ದಾರೆ. ‘‘ಮಹಿಳಾ ಪೊಲೀಸರು ನನ್ನನ್ನು ಸುತ್ತುವರಿದರು ಹಾಗೂ ಅವರ ಫೋನ್‌ನಿಂದ ವೀಡಿಯೊ ದಾಖಲಿಸಿಕೊಳ್ಳುವ ಮೂಲಕ ಬೆದರಿಕೆ ಒಡ್ಡಲು ಪ್ರಯತ್ನಿಸಿದರು’’ ಎಂದು ಅವರು ಹೇಳಿದ್ದಾರೆ.

ಈ ನಿರ್ಬಂಧವನ್ನು ವಿರೋಧಿಸಿ ಅಸಂಖ್ಯಾತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಗೇಟ್ ಬಳಿ ಪ್ರತಿಭಟನೆ ನಡೆಸಿದರು ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಮಹಿಳಾ ಪಂಚಾಯತ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ತಡೆಯಲು ಕ್ಯಾಂಪಸ್‌ನಲ್ಲಿ ಅಘೋಷಿತ 144 ಸೆಕ್ಷನ್ ಜಾರಿಗೊಳಿಸಿರುವುದರ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳು ಹಾಗೂ ನಾಯಕಿಯರನ್ನು ವಶಕ್ಕೆ ತೆಗೆದುಕೊಂಡಿರುವ ವಿರುದ್ಧ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಗೇಟ್ ಸಮೀಪ ಪ್ರತಿಭಟನೆ ನಡೆಸಿದೆವು  ಎಂದು ಎಐಎಸ್‌ಎಯ ಪತ್ರಿಕಾ ಹೇಳಿಕೆ ತಿಳಿಸಿದೆ. 

Similar News