ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ಸೇರಿ 5 ಮಂದಿ ಮೃತ್ಯು

Update: 2023-05-29 02:13 GMT

ಗುವಾಹತಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಪೊಲೀಸ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ನಾಗರಿಕರು, ಉಗ್ರರ ಮೇಲೆ ಗೋಲಿಬಾರ್ ಹಾಗೂ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಘಟನೆಗಳು ಇಂಫಾಲ ಕಣಿವೆ ಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ವರದಿಯಾಗಿವೆ.

ಸಂಘಟಿತ ಕಾರ್ಯಾಚರಣೆಯ ವೇಳೆ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 40 ಮಂದಿ ಕುಕಿ ಉಗ್ರರು ಹತರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ಘೋಷಿಸಿದ ಬೆನ್ನಲ್ಲೇ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಮಣಿಪುರದಲ್ಲಿ ಮೇ 3 ರಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಮೀಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿದ್ದನ್ನು ವಿರೋಧಿಸಿ ಬೆಟ್ಟ ಜಿಲ್ಲೆಗಳಲ್ಲಿ ಬುಡಕಟ್ಟು ಒಗ್ಗಟ್ಟು ಜಾಥ ನಡೆಸಿದ ದಿನ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೆ 79 ಮಂದಿ ಮೃತಪಟ್ಟಿದ್ದಾರೆ.

ರಾಜ್ಯ ಸರ್ಕಾರ ಉಗ್ರಗಾಮಿ ಸಂಘಟನೆಗಳು ಎಂದು ಹಣೆಪಟ್ಟಿ ಕಟ್ಟಿರುವ ಕೆಲ ಗುಂಪುಗಳು ಸ್ವಯಂಚಾಲಿತ ಬಂದೂಕುಗಳೊಂದಿಗೆ ದಾಳಿ ನಡೆಸುತ್ತಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಂಕಿತ ಕುಕಿ ಉಗ್ರರು ಇಂಫಾಲದ ಪಶ್ಚಿಮ ಜಿಲ್ಲೆ ಫಯೇಂಗ್‌ನಲ್ಲಿ ಗುಂಡಿನ ದಆಳಿ ನಡೆಸಿದ ಘಟನೆಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಕಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಕನಿಷ್ಠ ಆರು ಮಂದಿ ನಾಗರಿಕರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಸಾವು ಸಂಭವಿಸಿದ ಇತರ ಘಟನೆಗಳನ್ನು ಇನ್ನೂ ದೃಢಪಡಿಸಬೇಕಿದೆ ಎಂದು ಅಧಿಕಾರಿ ಹೇಳಿದ್ದಾರೆ. ಭಾನುವಾರ ಮುಂಜಾನೆ  ಸುಂಗು ಪ್ರದೇಶದ ಐದು ಗ್ರಾಮಗಳಲ್ಲಿ ಕುಕಿ ಸುಮದಾಯದ ಸದಸ್ಯರ ನಿವಾಸಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ ಎನ್ನಲಾಗಿದೆ. ಸಂತ್ರಸ್ತ ಗ್ರಾಮಗಳಿಗೆ ಸೇನೆ ಪ್ರವೇಶಿಸದಂತೆಯೂ ತಡೆ ಒಡ್ಡಲಾಗಿದೆ ಎಂಬ ವರದಿಗಳು ಬಂದಿವೆ.

Similar News