ಮೋದಿ ಸರಕಾರದ ಒಂಭತ್ತು ವರ್ಷಗಳಲ್ಲಿ ಬಿಜೆಪಿ ಜನರನ್ನು ಲೂಟಿ ಮಾಡಿದೆ: ಖರ್ಗೆ ಆಕ್ರೋಶ

Update: 2023-05-29 15:35 GMT

ಹೊಸದಿಲ್ಲಿ: ಒಂಭತ್ತು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿರುವ ನರೇಂದ್ರ ಮೋದಿ ಸರಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಅದು ‘ಮಾರಣಾಂತಿಕ ಹಣದುಬ್ಬರ’ದ ಮೂಲಕ ಜನರ ಗಳಿಕೆಗಳನ್ನು ಲೂಟಿ ಮಾಡುತ್ತಿದೆ ಮತ್ತು ಈ ಕುರಿತು ದುರಹಂಕಾರದ ಮಾತುಗಳನ್ನು ಆಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಮೇ 26ರಂದು ಒಂಭತ್ತು ವರ್ಷಗಳನ್ನು ಪೂರೈಸಿದೆ. ಒಂಭತ್ತು ವರ್ಷಗಳಲ್ಲಿ ಎನ್ಡಿಎ ಸರಕಾರದ ಸಾಧನೆಗಳನ್ನು ಎತ್ತಿ ತೋರಿಸಿರುವ ಅದು,ಪ್ರಧಾನಿ ಮೋದಿಯವರ ನಾಯಕತ್ವದಡಿ ದೇಶವು ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಿಕೊಂಡಿದೆ.

ಟ್ವೀಟ್ ನಲ್ಲಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಖರ್ಗೆ,‘ಬಿಜೆಪಿಯು ಒಂಭತ್ತು ವರ್ಷಗಳಲ್ಲಿ ಭಾರೀ ಹಣದುಬ್ಬರದೊಂದಿಗೆ ಸಾರ್ವಜನಿಕರ ಗಳಿಕೆಗಳನ್ನು ಲೂಟಿ ಮಾಡಿದೆ. ಜಿಎಸ್ಟಿ ಎಲ್ಲ ಪ್ರಮುಖ ವಿಷಯಗಳ ಮೇಲೆ ಪರಿಣಾಮ ಬೀರಿತು, ಬಜೆಟ್ ಅನ್ನು ಹಾಳುಗೆಡವಿತು,ಬದುಕನ್ನು ಕಠಿಣವಾಗಿಸಿತು ’ಎಂದು ಆರೋಪಿಸಿದ್ದಾರೆ.

‘‘ಹಣದುಬ್ಬರವು ಗೋಚರಿಸುತ್ತಿಲ್ಲ ಅಥವಾ ನಾವು ಈ ದುಬಾರಿ ಆಹಾರವನ್ನು ತಿನ್ನುವುದೇ ಇಲ್ಲ ಎಂಬ ದುರಹಂಕಾರದ ಹೇಳಿಕೆಗಳು; ‘ಅಚ್ಛೇ ದಿನ್ ’ನಿಂದ ‘ಅಮೃತ ಕಾಲ ’ದವರೆಗಿನ ಪಯಣವು ಹಣದುಬ್ಬರದಿಂದಾಗಿ ಸಾರ್ವಜನಿಕ ಲೂಟಿಯ ಪ್ರಮಾಣವನ್ನು ಹೆಚ್ಚಿಸಿದೆ ’’ ಎಂದೂ ಖರ್ಗೆ ಹೇಳಿದ್ದಾರೆ.

Similar News