ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಸುರೇಶ್ ಬಾಲು ಧನೋರ್ಕರ್ ನಿಧನ

Update: 2023-05-30 06:42 GMT

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಸುರೇಶ್ ಬಾಲು ಧನೋರ್ಕರ್ ಅವರು ಮಂಗಳವಾರ ಮುಂಜಾನೆ ರಾಷ್ಟ್ರೀಯ ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಧನೋರ್ಕರ್ ಅವರಿಗೆ 47 ವರ್ಷ ವಯಸ್ಸಾಗಿತ್ತು ಹಾಗೂ  ಅವರ ಪತ್ನಿ,  ವರೋರಾ-ಭದ್ರಾವತಿ ವಿಧಾನಸಭೆ ಕ್ಷೇತ್ರದ ಶಾಸಕಿಯೂ ಆಗಿರುವ ಪ್ರತಿಭಾ ಹಾಗೂ  ಇಬ್ಬರು ಪುತ್ರರನ್ನು ಅಗಲಿದ್ದಾರೆ.

"ಕಳೆದ ವಾರ ಅವರನ್ನು ಕಿಡ್ನಿಸ್ಟೋನ್  ಚಿಕಿತ್ಸೆಗಾಗಿ ನಾಗ್ಪುರ ಮೂಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಹೊಸದಿಲ್ಲಿಗೆ ಸ್ಥಳಾಂತರಿಸಲಾಯಿತು.  ಆದರೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.

ಚಂದ್ರಾಪುರದ ಲೋಕಸಭಾ ಸದಸ್ಯರಾದ ಧನೋರ್ಕರ್ ಅವರು ಮೇ 26 ರಂದು ನಾಗ್ಪುರದ ಆಸ್ಪತ್ರೆಯಲ್ಲಿ ಕಿಡ್ನಿಸ್ಟೋನ್  ಚಿಕಿತ್ಸೆ ಪಡೆದರು ಹಾಗೂ ಕೆಲವು ತೊಡಕುಗಳ ನಂತರ ರವಿವಾರ ದಿಲ್ಲಿಯ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು.

ಧನೋರ್ಕರ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಅವರ ಹುಟ್ಟೂರಾದ ವರೋರಾಗೆ ಕೊಂಡೊಯ್ಯಲಾಗುವುದು. ಮರುದಿನ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ.

ಧನೋರ್ಕರ್ ಅವರ 80 ವರ್ಷದ ತಂದೆ ನಾರಾಯಣ ಧನೋರ್ಕರ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ಸಂಜೆ ನಾಗ್ಪುರದಲ್ಲಿ ನಿಧನರಾದರು. ಸಂಸದರು ರವಿವಾರ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಸಂಸದರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ನಮ್ಮ ಕಾಂಗ್ರೆಸ್ ಪಕ್ಷದ  ಸಂಸದೀಯ ಸಹೋದ್ಯೋಗಿ, ಸುರೇಶ್ ನಾರಾಯಣ ಧನೋರ್ಕರ್ (ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದ ಸಂಸದ) ರಾತ್ರೋರಾತ್ರಿ ನಿಧನರಾದರು ಎಂದು ತಿಳಿದು ದುಃಖವಾಗಿದೆ, 17 ನೇ ಲೋಕಸಭೆಯ ಸಮಯದಲ್ಲಿ ಕಾಂಗ್ರೆಸ್  ಎರಡನೇ ಸಂಸದರನ್ನು ಕಳೆದುಕೊಂಡಿದೆ. ಧನೋರ್ಕರ್  ಅವರಿಗೆ ಕೇವಲ 47 ವರ್ಷ. ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪ . ಓಂ ಶಾಂತಿ’’ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

Similar News