ಇಂದು ಸಂಜೆ ಗಂಗಾ ನದಿಯಲ್ಲಿ ಪದಕಗಳನ್ನು ಎಸೆಯುವುದಾಗಿ ಘೋಷಿಸಿದ ಪ್ರತಿಭಟನಾನಿರತ ಕುಸ್ತಿಪಟುಗಳು

Update: 2023-05-30 09:27 GMT

ಹೊಸದಿಲ್ಲಿ: ಬಾಲಕಿ  ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ  ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಪ್ರಮುಖ  ಕುಸ್ತಿಪಟುಗಳು,  ಇಂದು ಸಂಜೆ 6 ಗಂಟೆಗೆ ಉತ್ತರಾಖಂಡದ ಹರಿದ್ವಾರ ನಗರಕ್ಕೆ ತೆರಳಿ ಗಂಗಾ ನದಿಗೆ ಪದಕಗಳನ್ನು ಎಸೆಯುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಕುಸ್ತಿಪಟುಗಳು ಈಗಾಗಲೇ ಹರಿದ್ವಾರಕ್ಕೆ ತೆರಳಿದ್ದು, ಸಂಜೆ 6 ಗಂಟೆಗೆ ಪದಕಗಳನ್ನು ಗಂಗಾ ನದಿಗೆ ಎಸೆಯಲಿದ್ದಾರೆ.  ಆನಂತರ ದಿಲ್ಲಿಯ ಇಂಡಿಯಾ ಗೇಟ್ ಬಳಿ ಆಮರಣಾಂತ ಉಪವಾಸ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಪದಕಗಳನ್ನು ಕಳೆದುಕೊಂಡ ನಂತರ ನಮ್ಮ ಜೀವನಕ್ಕೆ ಯಾವುದೇ ಅರ್ಥವಿಲ್ಲ.  ಆದಾಗ್ಯೂ ನಮ್ಮ ಪದಕಗಳನ್ನು ಪವಿತ್ರ ಗಂಗಾ ನದಿಯಲ್ಲಿ ಮುಳುಗಿಸುತ್ತೇವೆ. ನಮ್ಮ ಕುತ್ತಿಗೆಗೆ ಅಲಂಕರಿಸಿದ ಈ ಪದಕಗಳಿಗೆ ಇನ್ನು ಅರ್ಥವಿಲ್ಲ ಎಂದು ಕಾಣುತ್ತದೆ. ನಾನು ಅದನ್ನು ಹಿಂತಿರುಗಿಸುವ ಕುರಿತು ಯೋಚಿಸುತ್ತಾ ಸಾಯುತ್ತಿದ್ದೇನೆ. ಆದರೆ ನಿಮ್ಮ ಸ್ವಾಭಿಮಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಜೀವನದಿಂದ ಏನು ಪ್ರಯೋಜನ" ಎಂದು  Twitter ಖಾತೆಯಲ್ಲಿ ಸಾಕ್ಷಿಕ್ ಮಲಿಕ್ ಬರೆದಿದ್ದಾರೆ.

ನಾವು  ಯಾರಿಗೆ ಪದಕಗಳನ್ನು ಹಿಂದಿರುಗಿಸುವುದು  ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಲಿಕ್ ,  ಸ್ವತಃ ಮಹಿಳೆಯಾದ ರಾಷ್ಟ್ರಪತಿಯವರು  ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಕುಳಿತು ವೀಕ್ಷಿಸಿದರು. ಆದರೆ ಅವರು  ಏನನ್ನೂ ಹೇಳಲಿಲ್ಲ ಎಂದರು.

ಪ್ರಧಾನಿ "ಒಮ್ಮೆಯೂ" ತಮ್ಮ ಬಗ್ಗೆ ಕೇಳಲಿಲ್ಲ ಎಂದು ಆರೋಪಿಸಿದ ಕುಸ್ತಿಪಟುಗಳು, ಅದರ ಬದಲಿಗೆ, ನಮ್ಮ ದಬ್ಬಾಳಿಕೆಗಾರ (ಬ್ರಿಜ್ ಭೂಷಣ್ ಸಿಂಗ್) ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಬೆರಗುಗೊಳಿಸುವ ಬಿಳಿ ಬಟ್ಟೆಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈ ಬಿಳಿಯು 'ನಾನೇ ವ್ಯವಸ್ಥೆ' ಎಂದು ಹೇಳುತ್ತಿರುವಂತೆ ನಮ್ಮನ್ನು ಕುಟುಕುತ್ತಿದೆ" ಎಂದು ಪ್ರಮುಖ  ಕುಸ್ತಿಪಟುಗಳಾದ  ಸಾಕ್ಷಿ ಮಲಿಕ್, ವಿನೇಶ್ ಫೋಗಟ್  ಹಾಗೂ  ಬಜರಂಗ್ ಪುನಿಯಾ ಟ್ವೀಟರ್ ನಲ್ಲಿ ಹಾಕಿರುವ ಪತ್ರದಲ್ಲಿ ತಿಳಿಸಿದ್ದಾರೆ.

"ನಮಗೆ ಇನ್ನು ಮುಂದೆ ಈ ಪದಕಗಳ ಅಗತ್ಯವಿಲ್ಲ. ಏಕೆಂದರೆ ಈ ವ್ಯವಸ್ಥೆಯು ನಮ್ಮ ಕುತ್ತಿಗೆಗೆ ಪದಕವನ್ನು ನೇತು ಹಾಕುವ ಮೂಲಕ ತನ್ನದೇ ಪ್ರಚಾರ ಮಾಡುತ್ತದೆ. ನಮ್ಮ ಬಾಯಿ ಮುಚ್ಚಿಸುತ್ತದೆ. ಬಳಿಕ  ಅವರು ನಮ್ಮನ್ನು ಶೋಷಿಸುತ್ತಾರೆ, ಪ್ರತಿಭಟಿಸಿದರೆ ನಮ್ಮನ್ನು ಜೈಲಿಗೆ ಹಾಕುತ್ತಾರೆ" ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಗಂಗಾ ನದಿಯನ್ನು "ನಮ್ಮ ತಾಯಿ" ಎಂದು ಭಾವಿಸಿ ನಾವು ಅದನ್ನು ಆಯ್ಕೆ ಮಾಡಿದ್ದೇವೆ ಎಂದ ಕುಸ್ತಿಪಟುಗಳು, ಅವರು ಗಂಗೆಯನ್ನು ಎಷ್ಟು ಪವಿತ್ರವೆಂದು ಪರಿಗಣಿಸುತ್ತಾರೋ , ಅಷ್ಟೇ ಪರಿಶುದ್ಧತೆಯಿಂದ ಶ್ರಮಿಸಿ ಕುಸ್ತಿಪಟುಗಳು ಈ ಪದಕಗಳನ್ನು ಗೆದ್ದಿದ್ದಾರೆ. ಪದಕಗಳು ಇಡೀ ದೇಶಕ್ಕೆ ಪವಿತ್ರವಾಗಿವೆ ಹಾಗೂ  ಪವಿತ್ರ ನದಿಯು ಅದಕ್ಕೆ ಸೂಕ್ತವಾದ ಸ್ಥಳವಾಗಿದೆ ಎಂದು ಅವರು ಹೇಳಿದರು.

Similar News