×
Ad

ಮಾದಕ ವಸ್ತು ಸಾಗಾಟ ಆರೋಪ: ಬಜರಂಗದಳ ಮುಖಂಡನ ಬಂಧನ; 22 ಕೆ.ಜಿ. ಗಾಂಜಾ ವಶ

Update: 2023-05-30 17:42 IST

ಭೋಪಾಲ್: ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಜರಂಗದಳದ ಜಿಲ್ಲಾ ಸಂಯೋಜಕ ಸುಂದರಂ ತಿವಾರಿ ಎಂಬಾತನನ್ನು ರೈಲ್ವೇ ರಕ್ಷಣಾ ಪಡೆಯ (ಆರ್‌ಪಿಎಫ್) ಅಪರಾಧ ಗುಪ್ತಚರ ತಂಡ ಬಂಧಿಸಿದೆ ಎಂದು ವರದಿಯಾಗಿದೆ.

ಸುಂದರಂ ತನ್ನ ಸಹಚರನೊಂದಿಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, 22 ಕಿಲೋಗ್ರಾಂಗಳಷ್ಟು ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ರೈಲಿನ ಮೂಲಕ ಗಾಂಜಾ ಕಳ್ಳಸಾಗಣೆದಾರರು ಸತಾನಾಗೆ ಆಗಮಿಸಿರುವ ಬಗ್ಗೆ ಆರ್‌ಪಿಎಫ್‌ನ ಅಪರಾಧ ಗುಪ್ತಚರ ತಂಡಕ್ಕೆ ನಿರ್ದಿಷ್ಟ ಮಾಹಿತಿ ಸಿಕ್ಕಿತ್ತು. ಸುಳಿವಿನ ಮೇರೆಗೆ ಪೊಲೀಸರು ಸಾರಾನಾಥ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ತನಿಖೆ ನಡೆಸಿದ ಪೊಲೀಸರು ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದ ಐವರನ್ನು ಗುರುತಿಸಿದ್ದಾರೆ. ಪೊಲೀಸರು ಅವರ ಬಳಿಗೆ ಸಮೀಪಿಸುತ್ತಿದ್ದಂತೆ, ಶಂಕಿತರು ತರಾತುರಿಯಲ್ಲಿ ರೈಲಿನಿಂದ ಇಳಿದು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ತಕ್ಷಣ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಜರಂಗದಳದ ನಾಯಕ ಸುಂದರಂ ತಿವಾರಿ ಹಲವಾರು ವರ್ಷಗಳಿಂದ ಮಾದಕವಸ್ತು ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಕಾನೂನು ಜಾರಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈ ನಡುವೆ, ಉಳಿದ ಮೂವರು ವ್ಯಕ್ತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಈ ಆರೋಪಿಗಳು ಉತ್ತರ ಪ್ರದೇಶದ ಬನಾರಸ್ ಮೂಲದವರು ಎಂದು ವರದಿಯಾಗಿದೆ.

Similar News