ಕುಂದಾಪುರ: ತೆಕ್ಕಟ್ಟೆ ಮಾಲಾಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

Update: 2023-05-30 15:00 GMT

ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಪಕ್ಕ ಮತ್ತೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಈ ವರ್ಷ ಇಲ್ಲಿಗೆ ಸಮೀಪದ ತೋಪಿನಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗಂಡು ಚಿರತೆ ಮಾ.10 ಸೆರೆಯಾಗಿದ್ದು, ಕಳೆದ 4 ವರ್ಷಗಳಲ್ಲಿ ಈ ತೋಪಿನಲ್ಲಿಟ್ಟ ಬೋನಿಗೆ ಒಟ್ಟು  7 ಚಿರತೆಗಳು ಬಿದ್ದು ಸೆರೆಯಾಗಿದೆ. 

ತೆಕ್ಕಟ್ಟೆ ಸಮೀಪದ ಮಾಲಾಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಉಪಟಳ ಜಾಸ್ತಿಯಾಗಿದೆ. ಮನೆ ಸಮೀಪ ಬಂದು ನಾಯಿ ಬೇಟೆಗೆ ಚಿರತೆ ಹೊಂಚು ಹಾಕುತ್ತಿದೆ. ಅಲ್ಲದೆ ಸ್ಥಳೀಯ ವಾಸಿಗಳು ಸಂಚರಿಸುವಾಗಲೂ ಆಗ್ಗಿಂದಾಗೆ ಪ್ರತ್ಯಕ್ಷವಾಗಿ ಭೀತಿ ಸೃಷ್ಟಿಸಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್ ನೇತೃತ್ವದಲ್ಲಿ ಈಗಾಗಾಲೇ ಬೋನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಸ್ಥಳೀಯರಾದ ಸುರೇಶ್ ದೇವಾಡಿಗ, ಸತೀಶ್ ದೇವಾಡಿಗ, ರಾಜಾ, ಹರೀಶ್, ಗೌತಮ್, ಅಭಿ ಹಾಗೂ ಇತರರು ಕೊಂಚ ಹಾನಿಯಾಗಿದ್ದ ಬೋನಿನ ದುರಸ್ತಿ ಮಾಡಿದ್ದಾರೆ.

ಆತಂಕದಲ್ಲಿ ಮಾಲಾಡಿ ಜನತೆ

ನಿರಂತರವಾಗಿ ಚಿರತೆ ಉಪಟಳವಿರುವ ಮಾಲಾಡಿ ಯಲ್ಲಿ ಸರಕಾರಿ ಶಾಲೆ, ಅಂಗನವಾಡಿ, ದೇವಸ್ಥಾನ ಹಾಗೂ ವಸತಿ ಪ್ರದೇಶವಿದ್ದು 50ಕ್ಕೂ ಅಧಿಕ ಮನೆಗಳಿವೆ. ಕಳೆದ ನಾಲ್ಕೈದು ದಿನದಿಂದ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯಿಟ್ಟ ಬೋನಿಗೆ ಇದುವರೆಗೆ ಚಿರತೆ ಸೆರೆಯಾಗಿಲ್ಲ. ಇನ್ನೇನು ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳು ಇದೇ ಭಾಗದಲ್ಲಿ ಸಂಚರಿಸುವ ಕಾರಣ ಪೋಷಕರಲ್ಲಿ ಆತಂಕ ಹೆಚ್ಚಿದೆ.

Similar News