ಟ್ವಿಟರ್ ನಲ್ಲಿ ಮೋದಿ ಫಾಲೋವರ್‌ಗಳು ಪೆದ್ದರು: ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

Update: 2023-05-30 16:28 GMT

ಹೊಸದಿಲ್ಲಿ: ಇತ್ತೀಚಿನ ಟ್ವಿಟರ್ ವಿನಿಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫಾಲೋವರ್‌ಗಳು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರನ್ನು ‘ಪೆದ್ದರು’ ಎಂದು ಬಣ್ಣಿಸಿದ್ದಾರೆ. ತಾನು ಸಂಸತ್ತಿಗೆ ಪುನರಾಯ್ಕೆಗೊಳ್ಳುವುದನ್ನು ಮೋದಿಯವರು ಬೆಂಬಲಿಸುವುದಿಲ್ಲ ಎಂಬ ಫಾಲೋವರ್‌ಗಳ ಪುನರಾವರ್ತಿತ ಟ್ವೀಟ್‌ಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ಟೀಕೆಗಳಿಗೆ ತಿರುಗೇಟು ನೀಡಿರುವ ಸ್ವಾಮಿ, ಮೋದಿಯವರ ಯಾವುದೇ ನೇರ ಬೆಂಬಲವಿಲ್ಲದೆ ತಾನು ಈಗಾಗಲೇ ಆರು ಸಲ ಸಂಸತ್ತಿಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿದ್ದಾರೆ.

ತಲಾ ಮೂರು ಅವಧಿಗಳಿಗೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸ್ವಾಮಿ, ರಾಷ್ಟ್ರ ರಾಜಕಾರಣದಲ್ಲಿ ತನ್ನ ವ್ಯಾಪಕ ಅನುಭವವನ್ನು ಎತ್ತಿ ತೋರಿಸಿದ್ದಾರೆ. ಮೋದಿ ಫಾಲೋವರ್‌ಗಳ ಟೀಕೆಗಳಿಗೆ ಹೊರತಾಗಿಯೂ ಸ್ವಾಮಿ, ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಸೇರಿದಂತೆ ಏಳನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಆಯ್ಕೆಯಾಗುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಮೋದಿಯವರ ಬೆಂಬಲದೊಂದಿಗೆ ಸಂಸದರಾಗಿ ನಾಮ ನಿರ್ದೇಶನಗೊಳ್ಳುವುದಿಲ್ಲ ಎಂದು ಮೋದಿಯವರ ಫಾಲೋವರ್ಗಳ ಒಂದು ವರ್ಗ ಪದೇ ಪದೇ ಟ್ವೀಟಿಸಿದ್ದು ವಿವಾದವನ್ನು ಸೃಷ್ಟಿಸಿತ್ತು. ಈ ಫಾಲೋವರ್‌ಗಳನ್ನು ‘ಪೆದ್ದರು’ ಎಂದು ಬಣ್ಣಿಸಿರುವ ಸ್ವಾಮಿ, ತನ್ನ ಹಿಂದಿನ ಸಂಸದೀಯ ಅವಧಿಗಳ ಬಗ್ಗೆ ಅವರಲ್ಲಿ ತಿಳುವಳಿಕೆಯ ಕೊರತೆಗಾಗಿ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಮೋದಿಯವರೊಂದಿಗೆ ಯಾವುದೇ ನೇರ ಸಂಬಂಧವಿಲ್ಲದೆ ತನ್ನ ಹಿಂದಿನ ಆರು ಅವಧಿಗಳನ್ನು ಯಶಸ್ವಿಯಾಗಿ ಪೂರೈಸಿರುವುದಾಗಿ ಒತ್ತಿ ಹೇಳುವ ಮೂಲಕ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ ತನ್ನ ಸಾಮರ್ಥ್ಯವನ್ನು ಸ್ವಾಮಿ ಸೂಚಿಸಿದ್ದಾರೆ.

ವಿವಿಧ ವಿಷಯಗಳಲ್ಲಿ ತನ್ನ ಕಠಿಣ ನಿಲುವು ಮತ್ತು ಕಾನೂನು ಕುಶಾಗ್ರತೆಯಿಂದ ಹೆಸರಾಗಿರುವ ಸ್ವಾಮಿ ಹಲವಾರು ವರ್ಷಗಳಿಂದಲೂ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದಾರೆ. ಇತ್ತೀಚಿಗೆ ಅವರು ಮೋದಿ, ಅವರ ನೀತಿಗಳು ಮತ್ತು ಆಡಳಿತದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Similar News