ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿರುವ 22 ಶಾಸಕರು, 9 ಸಂಸದರು ಶಿಂಧೆಯ ಶಿವಸೇನೆ ತೊರೆಯಲು ಬಯಸಿದ್ದಾರೆ: ವರದಿ

Update: 2023-05-30 16:17 GMT

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯ 22 ಶಾಸಕರು ಮತ್ತು ಒಂಭತ್ತು ಲೋಕಸಭಾ ಸಂಸದರು ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿದ್ದು, ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ಶಿವಸೇನೆ (ಉದ್ಧವ ಬಾಳಾಸಾಹೇಬ ಠಾಕ್ರೆ)ಯ ಮುಖವಾಣಿ ‘ಸಾಮನಾ’ ವರದಿ ಮಾಡಿದೆ.

ಶಾಸಕರು ತನ್ನ ಪಕ್ಷದ ಸಂಪರ್ಕದಲ್ಲಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿಯಾಗದ್ದರಿಂದ ಅವರು ಶಿಂದೆ ನೇತೃತ್ವದ ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ಶಿವಸೇನೆ (ಠಾಕ್ರೆ) ಸಂಸದ ವಿನಾಯಕ ರಾವುತ್ ಹೇಳಿದರು.

‘ಹಮ್ ಹಿ ಶಿವಸೇನಾ’ದಂತಹ ಘೋಷಣೆಗಳನ್ನು ಕೂಗಿದ್ದ ಹಿರಿಯ ಶಿವಸೇನೆ ನಾಯಕ ಗಜಾನನ ಕೀರ್ತಿಕರ್ ಅವರು ಬಿಜೆಪಿಯ ವರ್ತನೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ‘ಸಾಮನಾ’ ಸೋಮವಾರ ಹೇಳಿದೆ.

ಬಿಜೆಪಿ ತಾರತಮ್ಯವೆಸಗುತ್ತಿದೆ ಎಂದು ಆರೋಪಿಸುವ ಮೂಲಕ ಕೀರ್ತಿಕರ್ ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ. ‘ನಾವು 13 ಸಂಸದರಿದ್ದು,ಈಗ ಎನ್ಡಿಎ ಭಾಗವಾಗಿದ್ದೇವೆ. ನಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಆದ್ಯತೆಯಲ್ಲಿ ಪರಿಹಾರಗೊಳ್ಳಬೇಕು ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅದು ಸಂಭವಿಸುವುದು ಕಂಡು ಬರುತ್ತಿಲ್ಲ’ಎಂದು ಅತೃಪ್ತಿಯನ್ನು ವ್ಯಕ್ತಪಡಿಸಿದ್ದ ಕೀರ್ತಿಕರ್, ತನ್ನ ಪಕ್ಷವು ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಬಯಸಿದೆ ಎಂದು ಹೇಳಿಕೊಂಡಿದ್ದರು.

ಸ್ವಾಭಿಮಾನ ಮತ್ತು ಗೌರವವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಪಕ್ಷವು ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ ಎಂದು ಕೀರ್ತಿಕರ್ ಹೇಳಿಕೊಂಡಿದ್ದಾರೆ. ಅಂದರೆ ಅವರು ಬಿಜೆಪಿಯಿಂದ ಸ್ಥಾನಗಳಿಗಾಗಿ ಕೇಳಿದ್ದಾರೆ. ಆದರೆ ಈ ಗುಂಪಿಗೆ ಐದಾರು ಸ್ಥಾನಗಳನ್ನೂ ನೀಡಲು ಬಿಜೆಪಿ ಸಿದ್ಧವಿಲ್ಲ ಎಂದು ‘ಸಾಮನಾ ’ ವರದಿ ಮಾಡಿದೆ.

Similar News