ತನ್ನ ದುಬಾರಿ ಮೊಬೈಲ್‌ ಹುಡುಕಲು ಜಲಾಶಯದ 21ಲಕ್ಷ ಲೀ. ನೀರು ಖಾಲಿ ಮಾಡಿಸಿದ ಅಧಿಕಾರಿಗೆ ಹಣ ಪಾವತಿಸಲು ಆದೇಶ

Update: 2023-05-30 16:42 GMT

ರಾಯಪುರ: ತನ್ನ ದುಬಾರಿ ಮೊಬೈಲ್ ಹುಡುಕಲು ಜಲಾಶಯದಿಂದ ಖಾಲಿ ಮಾಡಿದ 21 ಲಕ್ಷ ಲೀಟರ್ ನೀರಿಗೆ ಹಣ ಪಾವತಿಸುವಂತೆ ಅಧಿಕಾರಿಗೆ ಚತ್ತೀಸ್ಗಢ ಸರಕಾರ ಸೂಚಿಸಿದೆ. ಬೇಸಿಗೆ ಕಾಲದಲ್ಲಿ ನೀರಾವರಿ ಹಾಗೂ ಇತರ ಉದ್ದೇಶಗಳಿಗೆ ಎಲ್ಲಾ ಜಲಾಶಯಗಳಲ್ಲಿ ನೀರು ಇರುವ ಅಗತ್ಯತೆ ಇದೆ ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

‘‘ಪೋಲು ಮಾಡಿರುವ ನೀರಿನ ವೆಚ್ಚವನ್ನು ಅವರ ವೇತನದಿಂದ ಯಾಕೆ ಭರಿಸಬಾರದು’’ ಎಂದು ಇಂದ್ರಾವತಿ ಯೋಜನೆಯ ಎಂಜಿನಿಯರ್ ಅಧೀಕ್ಷಕರು ಉಪ ವಿಭಾಗೀಯ ಅಧಿಕಾರಿ ಆರ್.ಕೆ. ಧಿವಾರ್ ಅವರಿಗೆ ಮೇ 26ರಂದು ಪತ್ರ ಬರೆದಿದ್ದಾರೆ. ‘‘ಕಂಕೇರ್ ಜಿಲ್ಲೆಯ ಕೊಯ್ಲಿಬೇಡ ಬ್ಲಾಕ್ ನ ಆಹಾರ ಪರಿಶೀಲನಾ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನ ಪರಾಲ್ಕೋಟ್ ಜಲಾಶಯಕ್ಕೆ ರಜೆ ಕಳೆಯಲು ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ 1 ಲಕ್ಷ ರೂಪಾಯಿ ವೌಲ್ಯದ ಸ್ಮಾರ್ಟ್ ಫೋನ್ ಆಕಸ್ಮಿಕವಾಗಿ ಜಾರಿ ಜಲಾಶಯಕ್ಕೆ ಬಿದ್ದಿತ್ತು. ಸ್ಥಳೀಯರು ಜಲಾಶಯಕ್ಕೆ ಜಿಗಿದು ಫೋನ್ ಹುಡುಕಿದರು. ಆದರೆ, ವಿಫಲವಾದಾಗ, ಅಧಿಕಾರಿ ತನ್ನ ಫೋನ್ ಅನ್ನು ಪತ್ತೆ ಮಾಡಲು 30 ಎಚ್ಪಿಯ ಡೀಸೆಲ್ ಪಂಪ್ ತರಿಸಿ ನಿರಂತರ ಮೂರು ದಿನಗಳ ಕಾಲ ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದ್ದಾರೆ. ಇದು 1,500 ಎಕರೆ ಕೃಷಿ ಭೂಮಿಗೆ ಸಾಕಾಗುತ್ತಿತ್ತು’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. 

Similar News