ಅದಾನಿ ನಂಟಿನ 2 ವಿದೇಶಿ ಫಂಡ್‌ಗಳು ಮೇಲೆ 10 ವರ್ಷಗಳಿಂದ ನಿಗಾ: ಯಾವುದೇ ಕ್ರಮವಿಲ್ಲ; ಕಾಂಗ್ರೆಸ್ ಆರೋಪ

Update: 2023-05-30 16:47 GMT

ಹೊಸದಿಲ್ಲಿ: ಅದಾನಿ ಗುಂಪಿನೊಂದಿಗೆ ನಂಟು ಹೊಂದಿರುವ ಎರಡು ವಿದೇಶಿ ಫಂಡ್ಗಳ ಮೇಲೆ ಭಾರತೀಯ ತೆರಿಗೆ ಅಧಿಕಾರಿಗಳು ಕನಿಷ್ಠ 2014ರಿಂದಲೂ ನಿಗಾ ಇಟ್ಟಿದ್ದಾರೆ; ಆದರೆ ಒಂದೆರಡು ಸಾಮಾನ್ಯ ನೋಟಿಸ್ ಳನ್ನು ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮ ಆಗಿರುವುದು ಕಂಡುಬಂದಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಜಂಟಿ ಸಂಸದೀಯ ಸಮಿತಿ ನಡೆಸುವ ತನಿಖೆ ಮಾತ್ರ ಈ ವಿಷಯದಲ್ಲಿ ಸತ್ಯವನ್ನು ಹೊರತರಬಹುದಾಗಿದೆ ಎಂದು ಅದು ಹೇಳಿದೆ.

ಅದಾನಿ ಗುಂಪಿನ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಹಾಗೂ ಅದಾನಿ ಗುಂಪಿನ ಬಗ್ಗೆ ಹಿಂಡನ್‌ಬರ್ಗ್‌ ರಿಸರ್ಚ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಪ್ರಸ್ತಾವಗೊಂಡಿರುವ ಎರಡು ಮಾರಿಷಸ್ ಕಂಪೆನಿಗಳ ಮೇಲೆ ಭಾರತೀಯ ತೆರಿಗೆ ಅಧಿಕಾರಿಗಳು ಒಂದು ದಶಕಕ್ಕಿಂತಲೂ ಅಧಿಕ ಕಾಲ ನಿಗಾ ಇಟ್ಟಿದ್ದಾರೆ ಎಂಬ ಮಾಧ್ಯಮ ವರದಿಯೊಂದನ್ನು ಕಾಂಗ್ರೆಸ್ ಉಲ್ಲೇಖಿಸಿದೆ.

‘‘ಮಾರಿಷಸ್ ನಲ್ಲಿ ನೆಲೆ ಹೊಂದಿರುವ ಹಾಗೂ ಅದಾನಿ ಗುಂಪಿನೊಂದಿಗೆ ನಂಟು ಹೊಂದಿರುವ ಎರಡು ಕಂಪೆನಿಗಳ ಮೇಲೆ ಭಾರತೀಯ ತೆರಿಗೆ ಅಧಿಕಾರಿಗಳು 10 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಗಾ ಇಟ್ಟಿದ್ದಾರೆ. ಆದರೆ, ಅವುಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಇದು ಈಗ ಸಾಮಾನ್ಯ ಎಂಬಂತಾಗಿದೆ’’ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಟ್ವಿಟರ್ ನಲ್ಲಿ ಹೇಳಿದ್ದಾರೆ. ಮಾಧ್ಯಮ ವರದಿಯನ್ನು ಅದರ ಜೊತೆಗೆ ಲಗತ್ತಿಸಿದ್ದಾರೆ.

‘‘ಮಿತ್ರಕಾಲದಲ್ಲಿ, ಸೆಬಿಯಂತೆಯೇ, ಸಾಮಾನ್ಯವಾಗಿ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಆದಾಯ ತೆರಿಗೆ ಇಲಾಖೆಯನ್ನೂ ನಿದ್ರಿಸುವಂತೆ ಬಲವಂತಪಡಿಸಲಾಗಿದೆ’’ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

‘‘ಅದಕ್ಕಾಗಿಯೇ, ಅದಾನಿ ಗುಂಪಿನಲ್ಲಿ ಹೂಡಿಕೆಯಾಗಿರುವ 20,000 ಕೋಟಿ ರೂಪಾಯಿಗೂ ಅಧಿಕ ಲೆಕ್ಕವಿಲ್ಲದ ಹಣ ಎಲ್ಲಿಂದ ಬಂತೆನ್ನುವುದನ್ನು ಪತ್ತೆಹಚ್ಚಲು ಜೆಪಿಸಿ ತನಿಖೆಯಿಂದ ಮಾತ್ರ ಸಾಧ್ಯ ಎಂದು ನಾವು ಪದೇ ಪದೇ ಹೇಳುತ್ತಿರುವುದು’’ ಎಂದರು.

ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯಲ್ಲಿ ಹೇಳಿರುವಂತೆ, ಅದಾನಿ ಗುಂಪು ‘‘ಹಣಕಾಸು ಅವ್ಯವಹಾರಗಳಲ್ಲಿ’’ ಶಾಮೀಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.

ಇದಕ್ಕೂ ಮೊದಲು, ಕಾಂಗ್ರೆಸ್ ಅದಾನಿ ವಿಷಯದಲ್ಲಿ 100 ಪ್ರಶ್ನೆಗಳನ್ನು ಕೇಳಿತ್ತು ಹಾಗೂ ಅವುಗಳಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಉತ್ತರಗಳನ್ನು ಕೋರಿತ್ತು. ಈ ವಿಷಯದಲ್ಲಿ ವೌನ ಮುರಿಯುವಂತೆ ಅದು ಪ್ರಧಾನಿಗೆ ಮನವಿ ಮಾಡಿತ್ತು.

Similar News