ಮಣಿಪುರ: ಬಿಜೆಪಿಯ ವಿಭಜನಕಾರಿ ನೀತಿಯೇ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿದ ಕಾಂಗ್ರೆಸ್

ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹ

Update: 2023-05-30 17:07 GMT

ಹೊಸದಿಲ್ಲಿ: ಮಣಿಪುರದಲ್ಲಿ ‘‘ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರ’’ವನ್ನು ತಡೆಯಲು ರಾಜ್ಯದ ಬಿಜೆಪಿ ಸರಕಾರ ನಡೆಸುತ್ತಿರುವ ಪ್ರಯತ್ನಗಳಲ್ಲಿ ‘‘ಗಂಭೀರ ಲೋಪಗಳಿವೆ’’ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆಗೆ ಸುಪ್ರೀಂ ಕೋರ್ಟ್ ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಉನ್ನತಾಧಿಕಾರದ ವಿಚಾರಣಾ ಆಯೋಗವೊಂದನ್ನು ರಚಿಸಬೇಕು ಎಂದು ಆಗ್ರಹಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಕ್ಷದ ನಾಯಕರ ನಿಯೋಗವೊಂದು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ, ಮಣಿಪುರದಲ್ಲಿನ ಬೆಳವಣಿಗೆಗಳ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ನಿಯೋಗವು ರಾಷ್ಟ್ರಪತಿಗೆ ಮನವಿಯೊಂದನ್ನು ಸಲ್ಲಿಸಿತು.

ಬಿಜೆಪಿ ಸರಕಾರದ ವಿಭಜನಕಾರಿ ನೀತಿಯೇ ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣ ಎಂದು ಅದು ಆರೋಪಿಸಿದೆ. ‘‘ಬಿಜೆಪಿಯ ವಿಭಜಿಸಿ ಆಳುವ ರಾಜಕಾರಣವೇ ರಾಜ್ಯದಲ್ಲಿ ಇಂಥ ಅಗಾಧ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದು ದುರಂತ’’ ಎಂದು ಅದು ಹೇಳಿದೆ.

ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಮತ್ತು ಅದಕ್ಕಿಂತಲೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

‘‘2,000ಕ್ಕೂ ಅಧಿಕ ಮನೆಗಳನ್ನು ಸುಡಲಾಗಿದೆ ಅಥವಾ ಹಾನಿಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 10,000 ಜನರು ಈಗಲೂ ಪರಿಹಾರ ಶಿಬಿರಗಳು ಮತ್ತು ಸುರಕ್ಷಿತ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಈ ಶಿಬಿರಗಳಲ್ಲಿ ಅವರಿಗೆ ಸರಿಯಾದ ಆರೋಗ್ಯ ಮತ್ತು ಶೌಚ ಸೌಲಭ್ಯಗಳು ಲಭಿಸುತ್ತಿಲ್ಲ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ; ಈ ಮೂಲಕ ಮಕ್ಕಳಿಗೆ ಶಿಕ್ಷಣ ನಿರಾಕರಿಸಲಾಗುತ್ತಿದೆ’’ ಎಂಬುದಾಗಿ ಮನವಿಯಲ್ಲಿ ಹೇಳಲಾಗಿದೆ.

ರಾಜ್ಯದ ಪ್ರತಿ ಭಾಗದಲ್ಲಿ ಹಿಂಸೆಯನ್ನು ನಿಯಂತ್ರಿಸಲು ನಿರಂತರವಾಗಿ ದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಾಮಾನ್ಯ ಸ್ಥಿತಿಯನ್ನು ಮರಳಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ 12 ಬೇಡಿಕೆಗಳನ್ನು ಬೇಡಿಕೆಗಳನ್ನು ಕಾಂಗ್ರೆಸ್ ರಾಷ್ಟ್ರಪತಿಯ ಮುಂದಿಟ್ಟಿದೆ.

‘‘ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತಾಧಿಕಾರದ ತನಿಖಾ ಆಯೋಗವೊಂದನ್ನು ರಚಿಸಬೇಕು. ಎಲ್ಲಾ ಬಂಡುಕೋರ ಗುಂಪುಗಳನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಕೇಂದ್ರ ಸರಕಾರವು ತಕ್ಷಣ ಎಲ್ಲಾ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಸ್ತ್ರಗಳನ್ನು ಹೊಂದಿರುವ ಎಲ್ಲಾ ನಾಗರಿಕ ಗುಂಪುಗಳ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು’’ ಎಂದು ಪಕ್ಷ ಹೇಳಿದೆ.

ಶಸ್ತ್ರಧಾರಿ ಬಂಡುಕೋರರು ನುಗ್ಗಿ ಶಾಂತಿಯನ್ನು ಕದಡಲು ಸಾಧ್ಯವಾಗದಂತೆ, ಉಭಯ ಸಮುದಾಯಗಳ ತಪ್ಪಲಿನ ಸಮೀಪದಲ್ಲಿರುವ ಗ್ರಾಮಗಳಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ‘‘ನಿರ್ವಸಿತರಾಗಿರುವ ವ್ಯಕ್ತಿಗಳಿಗೆ ಅವರ ಮೂಲ ಸ್ಥಳದಲ್ಲಿ ಅಥವಾ ಸುರಕ್ಷಿತ ಸ್ಥಳದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳೊಂದಿಗೆ ಪುನರ್ವಸತಿ ಕಲ್ಪಿಸಬೇಕು. ಜೀವಹಾನಿ, ಸೊತ್ತುಹಾನಿ ಮತ್ತು ಸಂತ್ರಸ್ತರಿಗೆ ಸಂಬಂಧಿಸಿದ ಇತರ ವಸ್ತುಗಳ ಹಾನಿಗಳಿಗಾಗಿ ಉತ್ತಮ ಪರಿಹಾರ ನೀಡಬೇಕು’’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ನಾಪತ್ತೆಯಾಗಿರುವ ಜನರನ್ನು ಪತ್ತೆಹಚ್ಚಲು ವಿಶೇಷ ಆಂದೋಲನವೊಂದನ್ನು ನಡೆಸಬೇಕು ಎಂದು ಪಕ್ಷ ಒತ್ತಾಯಿಸಿದೆ. ‘‘ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರನ್ನು ತಕ್ಷಣ ಗುರುತಿಸಿ, ಅವರ ದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಅವರ ಕುಟುಂಬಿಕರಿಗೆ ಹಸ್ತಾಂತರಿಸಬೇಕು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ನಿರ್ವಸಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕು’’ ಎಂದು ಅದು ಹೇಳಿದೆ.

Similar News