ಸಾಮಾಜಿಕ ಜಾಲ ತಾಣದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಕಳಂಕ ಹಚ್ಚುವಂತಿಲ್ಲ: ಸುಪ್ರೀಂಕೋರ್ಟ್

Update: 2023-05-30 18:15 GMT

ಹೊಸದಿಲ್ಲಿ: ಸಾಮಾಜಿಕ ಜಾಲ ತಾಣದಲ್ಲಿ ಓರ್ವ ವ್ಯಕ್ತಿ ನ್ಯಾಯಾಂಗ ಅಧಿಕಾರಿಗಳಿಗೆ ಕಳಂಕ ಹಚ್ಚುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಲಂಚ ಆರೋಪ ಮಾಡಿದ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ವ್ಯಕ್ತಿಯೋರ್ವರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್ಪಿಎಸ್ ಬಂಡೇಲಾ ಅವರ ವರ್ಚಸ್ಸು, ಖ್ಯಾತಿ ಮತ್ತು ಪ್ರತಿಷ್ಠೆಗೆ ಕಳಂಕ ಹಚ್ಚುತ್ತದೆ ಎಂದು ಹೇಳಲಾದ ಪತ್ರವನ್ನು ವ್ಯಾಟ್ಸ್ ಆ್ಯಪ್ನಲ್ಲಿ ಪ್ರಸಾರ ಮಾಡಿದ ಕೃಷ್ಣ ಕುಮಾರ್ ರಘುವಂಶಿ ಎಂಬವರ ಅರ್ಜಿಯಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ನ್ಯಾಯಾಧೀಶರ ವಿರುದ್ಧ ಲಂಚ ಆರೋಪ ಮಾಡಿರುವುದಕ್ಕೆ ರಘುವಂಶಿ ವಿರುದ್ಧ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಆರಂಭಿಸಿತ್ತು. ‘‘ನೀವು ಕೇವಲ ಅನುಕೂಲಕರ ಆದೇಶ ಪಡೆಯಲಿಲ್ಲ ಎಂಬ ಕಾರಣಕ್ಕೆ, ನ್ಯಾಯಾಂಗ ಅಧಿಕಾರಿಗಳಿಗೆ ಕಳಂಕ ಹಚ್ಚುವಂತಿಲ್ಲ್ಲ’’ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪ್ರಶಾಂತ್ ಕಿಶೋರ್ ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ಹೇಳಿದೆ.

ಕಾರ್ಯಾಂಗ ಹಾಗೂ ಬಾಹ್ಯಾ ಶಕ್ತಿಗಳಿಂದ ನ್ಯಾಯಾಂಗ ಸ್ವತಂತ್ರ ಎಂದು ಭಾವಿಸಬಾರದು. ಇದು ಇತರರಿಗೆ ಕೂಡ ಪಾಠ ಎಂದು ಪೀಠ ಹೇಳಿದೆ. ‘‘ನ್ಯಾಯಾಂಗ ಅಧಿಕಾರಿಗೆ ಯಾವುದೇ ರೀತಿಯ ಕಳಂಕ ಹಚ್ಚುವಾಗ ಅವರು ಎರಡು ಬಾರಿ ಆಲೋಚಿಸಬೇಕು. ಅವರು ನ್ಯಾಯಾಂಗ ಅಧಿಕಾರಿಗೆ ಕಳಂಕ ಹಚ್ಚಿದ್ದಾರೆ. ನ್ಯಾಯಾಂಗ ಅಧಿಕಾರಿಯ ವರ್ಚಸ್ಸಿಗೆ ಉಂಟು ಮಾಡಿರುವ ಹಾನಿಯ ಬಗ್ಗೆ ಅವರು ಚಿಂತಿಸಬೇಕು’’ ಎಂದು ನ್ಯಾಯಮೂರ್ತಿ ತ್ರಿವೇದಿ ಅವರು ವೌಖಿಕವಾಗಿ ಅಭಿಪ್ರಾಯಿಸಿದರು.

ನ್ಯಾಯಾಲಯದಿಂದ ಕ್ಷಮೆ ಕೋರಿದ ರಘುವಂಶಿ ಪರ ನ್ಯಾಯವಾದಿ, ಜೈಲು ಶಿಕ್ಷೆಯ ಆದೇಶ ಕಠಿಣವಾಯಿತು. ಈ ವಿಷಯ ವೈಯುಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದ್ದು ಹಾಗೂ ದೂರುದಾರರು ಮೇ 27ರಿಂದ ಕಾರಾಗೃಹದಲ್ಲಿ ಇದ್ದಾರೆ ಎಂದರು. ಇದಕ್ಕೆ ನ್ಯಾಯಾಲಯ, ‘‘ನಾವು ಇಲ್ಲಿ ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳುತ್ತೇವೆ., ಕ್ಷಮೆ ಕೋರಬೇಡಿ, ಮುಖ್ಯವಾಗಿ ಇಂತಹ ವ್ಯಕ್ತಿಗಳ ಬಗ್ಗೆ ಕ್ಷಮೆ ಕೋರಬೇಡಿ’’ ಎಂದು ಹೇಳಿತು.

Similar News