ಕುಸ್ತಿಪಟುಗಳ ಪ್ರತಿಭಟನೆ ಕುರಿತು ಚರ್ಚೆಗೆ ಗುರುವಾರ ಮಹಾಪಂಚಾಯತ್ ಗೆ ಕರೆ ನೀಡಿದ ರೈತ ನಾಯಕ ನರೇಶ್ ಟಿಕಾಯತ್

Update: 2023-05-31 06:50 GMT

ಮುಝಾಫರ್‌ನಗರ (ಯುಪಿ): ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಮುಝಫರ್‌ನಗರದ ಸೊರಮ್ ಗ್ರಾಮದಲ್ಲಿ ಗುರುವಾರ ‘ಮಹಾಪಂಚಾಯತ್’ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ಮುಖಂಡ ನರೇಶ್ ಟಿಕಾಯತ್ ಹೇಳಿದ್ದಾರೆ.

ಈ ವಿಷಯವನ್ನು ಮಹಾಪಂಚಾಯತ್‌ನಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದು ಬಲ್ಯಾನ್ ಖಾಪ್ ಮುಖ್ಯಸ್ಥ ಟಿಕಾಯತ್ ಮಂಗಳವಾರ ರಾತ್ರಿ ತಿಳಿಸಿದ್ದಾರೆ.

ನಾಟಕೀಯ ಬೆಳವಣಿಗೆಯೊಂದರಲ್ಲಿ  ಮಂಗಳವಾರ, ಭಾರತದ ಕೆಲವು ಅತ್ಯುತ್ತಮ ಕುಸ್ತಿಪಟುಗಳು ನೂರಾರು ಬೆಂಬಲಿಗರೊಂದಿಗೆ ಹರಿದ್ವಾರದ ಗಂಗಾ ದಡದಲ್ಲಿ ಜಮಾಯಿಸಿ, ತಮ್ಮ ವಿಶ್ವ ಹಾಗೂ  ಒಲಿಂಪಿಕ್ ಪದಕಗಳನ್ನು ಪವಿತ್ರ ನದಿಯಲ್ಲಿ ಮುಳುಗಿಸುವುದಾಗಿ ಬೆದರಿಕೆ ಹಾಕಿದ್ದರು, ಆದರೆ ಖಾಪ್ ಹಾಗೂ ರೈತ ಮುಖಂಡರು  ಮನವರಿಕೆ ಮಾಡಿದ ನಂತರ  ಅಂತಹ ನಿರ್ಧಾರವನ್ನು ಮುಂದೂಡಿದರು.  ರೈತ ನಾಯಕರು  ಕುಂದುಕೊರತೆಗಳನ್ನು ಪರಿಹರಿಸಿಕೊಡಲು ಐದು ದಿನಗಳ ಕಾಲಾವಕಾಶವನ್ನು ಕೋರಿದರು.

ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಮಂಗಳವಾರ ಹರ್ ಕಿ ಪೌರಿಗೆ ತೆರಳಿ  ಹಲವು ಮಹಿಳಾ  ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್  ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು  ಪ್ರತಿಭಟಿಸಿದರು.

Similar News