ಡಬ್ಲ್ಯುಎಫ್ ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ನನ್ನು ಬೆಂಬಲಿಸಿ ಅಯೋಧ್ಯೆಯಲ್ಲಿ ಸಂತರಿಂದ ಬೃಹತ್ ರ‍್ಯಾಲಿ

Update: 2023-05-31 07:47 GMT

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಲು  ಅಯೋಧ್ಯೆಯ  ಸಂತರ   ಗುಂಪು ಮುಂದಿನ ವಾರ ರ‍್ಯಾಲಿಯನ್ನು ಆಯೋಜಿಸುವುದಾಗಿ  ಘೋಷಿಸಿದೆ.

ಅನೇಕ ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳನ್ನು ಹೊಂದಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಸಂತರು  ಹೇಳಿದ್ದಾರೆ.

ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ  ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು, ಭಾರತೀಯ ಕುಸ್ತಿ ಫೆಡರೇಶನ್  ಅಧ್ಯಕ್ಷ,  ಬಿಜೆಪಿ ಸಂಸದ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಹಾಗೂ ಸಿಂಗ್ ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಜೂನ್ 5 ರಂದು ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ರ‍್ಯಾಲಿ ನಡೆಸುವುದಾಗಿ ಸಂತರು ಹೇಳಿದ್ದಾರೆ.

"ನಾವು ಅಯೋಧ್ಯೆಯ ಸಂತರು ಹಾಗೂ  ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬಂದವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ರ್ಯಾಲಿಯನ್ನು ನಡೆಸುತ್ತೇವೆ" ಎಂದು ಮಹಂತ್ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಪೋಕ್ಸೊ ಕಾಯ್ದೆಯಲ್ಲಿ ಹಲವು ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳಿರುವುದರಿಂದ ನಾವು ಕೂಡ ಅದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

"ದೇಶದ ಹಿರಿಯ ಸಂತರು ಮತ್ತು ದಾರ್ಶನಿಕರು ನೀಡಿದ ಕರೆಯ ಮೇರೆಗೆ ಈ ರ್ಯಾಲಿಯನ್ನು ಆಯೋಜಿಸಲಾಗಿದೆ. ಹರಿದ್ವಾರ, ಕಾಶಿ, ಮಥುರಾ ಹಾಗೂ  ದೇಶದ ಇತರ ಪುಣ್ಯಕ್ಷೇತ್ರಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಸಂತರು  ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ’’  ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟ ಸಹವರ್ತಿ ಹಾಗೂ  ಆಪ್ತ ಸಹಾಯಕ ಸುಭಾಷ್ ಸಿಂಗ್ ಅವರು ಪಿಟಿಐಗೆ ತಿಳಿಸಿದ್ದಾರೆ.

Similar News