ಮುಸ್ಲಿಮರನ್ನು ದ್ವೇಷಿಸುವುದು ಇಂದು 'ಫ್ಯಾಷನ್‌' ಆಗಿಬಿಟ್ಟಿದೆ: ನಾಸಿರುದ್ದೀನ್‌ ಶಾ

Update: 2023-05-31 16:40 GMT

ಹೊಸದಿಲ್ಲಿ: 'ದಿ ಕೇರಳ ಸ್ಟೋರಿ' ಎಬ್ಬಿಸಿರುವ ವಿವಾದದ ನಡುವೆ ಪ್ರತಿಕ್ರಿಯಿಸಿರುವ ಹಿರಿಯ ನಟ ನಾಸಿರುದ್ದೀನ್‌ ಶಾ “ಮುಸ್ಲಿಮರನ್ನು ದ್ವೇಷಿಸುವ” ಪ್ರವೃತ್ತಿ ಜನಪ್ರಿಯಗೊಳ್ಳುತ್ತಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ದೈನಿಕವೊಂದಕ್ಕೆ ಸಂದರ್ಶನ ನೀಡಿದ ಶಾ, “ಪ್ರಸ್ತುತ ಸಮಯ ಆತಂಕ ಮೂಡಿಸುವ ಸಮಯವಾಗಿದೆ. ಸಂಪೂರ್ಣವಾಗಿ ಪ್ರಚಾರದ ವಿಷಯಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಾಗುತ್ತಿದೆ,” ಎಂದು ಹೇಳಿದರು.

“ಮುಸ್ಲಿಮರನ್ನು ದ್ವೇಷಿಸುವುದು ಶಿಕ್ಷಿತ ಜನರಲ್ಲಿಯೂ ಈ ದಿನಗಳಲ್ಲಿ ಫ್ಯಾಷನ್‌ ಆಗಿ ಬಿಟ್ಟಿದೆ. ಆಡಳಿತ ಪಕ್ಷವು ಇದನ್ನು ಚೆನ್ನಾಗಿ ಬಳಸಿಕೊಂಡಿದೆ. ನಾವು ಜಾತ್ಯತೀತತೆ, ಪ್ರಜಾಪ್ರಭುತ್ವ ಎಂದೆಲ್ಲಾ ಮಾತನಾಡುತ್ತೇವೆ, ಹಾಗಿದ್ದರೆ ಪ್ರತಿಯೊಂದರಲ್ಲೂ ಧರ್ಮವನ್ನು ಏಕೆ ತರಲಾಗುತ್ತಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವೊಂದು ವಿಚಾರಗಳಲ್ಲಿ ಚುನಾವಣಾ ಆಯೋಗದ ಮೌನವನ್ನೂ ಶಾ ಪ್ರಶ್ನಿಸಿದರು. “ಮುಸ್ಲಿಂ ನಾಯಕರೊಬ್ಬರು ಮತದಾರರಿಗೆ ಅಲ್ಲಾಹು ಅಕ್ಬರ್‌ ಹೇಳಿ ಮತ ಹಾಕಿ ಎಂದಿದ್ದರೆ ಅದು ಕೋಲಾಹಲ ಸೃಷ್ಟಿಸುತ್ತಿತ್ತು. ಆದರೆ ನಮ್ಮ ಪ್ರಧಾನಿಯೇ ಈ ರೀತಿಯ ಮಾತುಗಳನ್ನಾಡುತ್ತಾರೆ ಮತ್ತು ಸೋಲುತ್ತಾರೆ.  ಇಂತಹ ವಿಚಾರ ಮುಂದೆ ನಡೆಯದು ಎಂದು ಆಶಿಸುತ್ತೇನೆ. ಆದರೆ ಇಂತಹ ವಿಚಾರಗಳು ಈಗ ಉತ್ತುಂಗ ತಲುಪಿದೆ. ಸರಕಾರದ ಈ ರೀತಿಯ ಜಾಣತನದ ನಡೆ ಕೆಲಸ ಮಾಡಿದೆ, ಎಷ್ಟು ಸಮಯ ಅದು ಕೆಲಸ ಮಾಡುವುದು ಎಂದು ನೋಡೋಣ,” ಎಂದರು.

Similar News