ಪ್ರಧಾನಿಯ ರಾಜಸ್ಥಾನ ರ‍್ಯಾಲಿಗೆ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆದ ‘ಮೋದಿ ಗೋ ಬ್ಯಾಕ್’

Update: 2023-05-31 12:33 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಬುಧವಾರದ ರಾಜಸ್ಥಾನ ರ‍್ಯಾಲಿಗೆ ಮುನ್ನ ‘ಮೋದಿ ಗೋ ಬ್ಯಾಕ್’ ಹ್ಯಾಷ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.

ಬುಧವಾರ ಅಪರಾಹ್ನ 1:30ರವರೆಗೆ ‘ಮೋದಿ ಗೋ ಬ್ಯಾಕ್’ ಹ್ಯಾಷ್ ಟ್ಯಾಗ್ನೊಂದಿಗೆ 93,900ಕ್ಕೂ ಅಧಿಕ ಟ್ವೀಟ್‌ಗಳು ಹೊರಹೊಮ್ಮಿದ್ದವು. ಟ್ವಿಟರ್‌ನಲ್ಲಿ ಈ ಹ್ಯಾಷ್ ಟ್ಯಾಗ್ ನ್ನು ಬಳಸಿದವರಲ್ಲಿ ರಾಜಸ್ಥಾನದಲ್ಲಿಯ ಜಾಟ್ ಸಮುದಾಯದ ಸದಸ್ಯರು, ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ದಿಲ್ಲಿಯಲ್ಲಿ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳ ಮೇಲೆ ದಾಳಿಗಾಗಿ ಬಿಜೆಪಿಯನ್ನು ಟೀಕಿಸುತ್ತಿರುವವರು ಸೇರಿದ್ದಾರೆ.

ಹಲವಾರು ಟ್ವಿಟರ್ ಬಳಕೆದಾರರು ಶೇರ್ ಮಾಡಿಕೊಂಡಿರುವ ‘ಗೋ ಬ್ಯಾಕ್ ಮೋದಿ ’ಎಂದು ಬಿಳಿಯ ಬಣ್ಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿರುವ ರಸ್ತೆಯ ಚಿತ್ರವು ಪ್ರಧಾನಿ ರಾಜಸ್ಥಾನವನ್ನು ತಲುಪಿದಾಗ ಎಂತಹ ಸ್ವಾಗತವನ್ನು ಪಡೆಯಬಹುದು ಎನ್ನುವುದನ್ನು ಸೂಚಿಸಿತ್ತು.

‘ಅತಿಥಿಗಳನ್ನು ದೇವರಂತೆ ಕಾಣುವುದು ಮತ್ತು ಅವರನ್ನು ನಮ್ಮ ನೆಲಕ್ಕೆ ಸ್ವಾಗತಿಸುವುದು ರಾಜಸ್ಥಾನದ ಸಂಪ್ರದಾಯವಾಗಿದೆ. ಮೋದಿಜಿ, ನೀವು ಪ್ರಧಾನಿ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿದ್ದರೆ ನಾವೂ ಅದೇ ರೀತಿ ನಿಮ್ಮನ್ನು ಗೌರವಿಸುತ್ತಿದ್ದೆವು. ಆದರೆ ನೀವು ಆ ಹುದ್ದೆ ಮತ್ತು ದೇಶ ಎರಡಕ್ಕೂ ಅವಮಾನವನ್ನು ಮಾಡಿದ್ದೀರಿ. ಈ ದೇಶದ ಪುತ್ರಿಯರು ಕಣ್ಣೀರಿಡುತ್ತಿದ್ದಾರೆ, ಆದರೆ ನೀವು ಏನೂ ಆಗದವರಂತಿದ್ದೀರಿ’ ಎಂದು ಜಾಟ್ ಯೂನಿಟಿ ಹ್ಯಾಂಡಲ್ ಹೊಂದಿರುವ ಬಳಕೆದಾರರೋರ್ವರು ಟ್ವೀಟಿಸಿದ್ದರೆ, ‘ಮೋದಿ ನೋ ಎಂಟ್ರಿ’ ಎಂಬ ಬ್ಯಾನರ್ ನ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಇನ್ನೋರ್ವ ಬಳಕೆದಾರರು ‘ಇದು ರಾಜಸ್ಥಾನ. ಗುಜರಾತ್ ಎಂದು ನೀವು ಭಾವಿಸಿದ್ದೀರಾ?’ ಎಂದು ಟ್ವೀಟಿಸಿದ್ದಾರೆ.

ಅಜ್ಮೀರ್ ಜಿಲ್ಲೆಯಲ್ಲಿ ರ‍್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲು ಮೋದಿ ಬುಧವಾರ ರಾಜ್ಯಕ್ಕೆ ಭೇಟಿ ನೀಡಿದ್ದು,ಇದು ಕೇಂದ್ರದಲ್ಲಿ ಬಿಜೆಪಿಯು ಒಂಭತ್ತು ವರ್ಷಗಳ ಅಧಿಕಾರವನ್ನು ಪೂರೈಸಿರುವ ಸಂದರ್ಭದಲ್ಲಿ ಜನರನ್ನು ತಲುಪಲು ಆಯೋಜಿಸಿದ ಮೊದಲ ರ್ಯಾಲಿಯಾಗಿದೆ. ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

Similar News