ಸಿಜೆಐ ಚಂದ್ರಚೂಡ್ ರನ್ನು ಟ್ರೋಲ್ ಮಾಡುವುದರಲ್ಲಿ ಬಿಜೆಪಿ ಪರ ಖಾತೆಗಳು ಮುಂಚೂಣಿಯಲ್ಲಿ: ಸಂಶೋಧನಾ ವರದಿ

Update: 2023-05-31 13:38 GMT

ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರನ್ನು ‘ಆಂತರಿಕ ಶತ್ರು, ವಿದೇಶಿ ಏಜೆಂಟ್, ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿರುವುದಕ್ಕೂ ಆಡಳಿತಾರೂಢ ಬಿಜೆಪಿ ಪರ ಒಲವು ಹೊಂದಿರುವ ಡಿಜಿಟಲ್ ಪ್ರಭಾವಿಗಳಿಗೂ ಬಲವಾದ ನಂಟು ಇದೆ ಎನ್ನುವುದನ್ನು ನೂತನ ಸಂಶೋಧನಾ ವರದಿಯೊಂದು ತೋರಿಸಿದೆ.

ಚಂದ್ರಚೂಡ್ ಅವರ ತೀರ್ಪುಗಳು ಮತ್ತು ನಿಲುವುಗಳನ್ನು 2024ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರಣವಾಗುವ ತಕ್ಷಣದ ಬೆದರಿಕೆಯನ್ನಾಗಿ ಪ್ರಸ್ತುತ ಪಡಿಸಲಾಗಿದೆ ಎಂದು ಮಿಚಿಗನ್ ವಿವಿಯ ಸ್ಕೂಲ್ ಆಫ್ ಇನ್ಫಾರ್ಮೇಷನ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಜಾಯಜೀತ್ ಪಾಲ್ ಅವರು ವರದಿಯ ಟ್ವಿಟರ್ ಸಾರಾಂಶದಲ್ಲಿ ಬರೆದಿದ್ದಾರೆ. ಸೋಮವಾರ ಪ್ರಕಟಗೊಂಡಿರುವ ವರದಿಯನ್ನು ಸಿದ್ಧಪಡಿಸುವಲ್ಲಿ ಅದೇ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಶೆರಿಲ್ ಅಗರವಾಲ್ ಪಾಲ್ ಜೊತೆ ಕೈಜೋಡಿಸಿದ್ದಾರೆ.

ಚಂದ್ರಚೂಡ್ ಜಾಗತಿಕ ಹಿತಾಸಕ್ತಿಗಳಿಂದ ಪ್ರಚೋದಿಸಲ್ಪಟ್ಟಿದ್ದಾರೆ, ಉದಾರವಾದಿ ಚಿಂತನೆಗಳಿಂದ ಬೋಧಿಸಲ್ಪಟ್ಟಿದ್ದಾರೆ, ಪರಿಣಾಮವಾಗಿ ಅವರು ಭಾರತೀಯ ರಾಜಕೀಯದಲ್ಲಿ ಕೈಗೊಂಬೆಯಾಗಿದ್ದಾರೆ ಎಂದು ಅವರ ವಿರೋಧಿಗಳು ಪ್ರತಿಪಾದಿಸುತ್ತಿದ್ದಾರೆ ಎಂದು ಪಾಲ್ ಹೇಳಿದ್ದಾರೆ.

ಚಂದ್ರಚೂಡ್ರ ತಂದೆ ವೈ.ವಿ.ಚಂದ್ರಚೂಡ್ 1978ರಿಂದ 1985ರವರೆಗೆ ಸಿಜೆಐ ಆಗಿದ್ದರಿಂದ ಅವರ ವಿರುದ್ಧದ ಸಾಮಾಜಿಕ ಮಾಧ್ಯಮ ದಾಳಿಗಳು ಸ್ವಜನ ಪಕ್ಷಪಾತ ಪರಿಕಲ್ಪನೆಯೊಂದಿಗೂ ಸಂಬಂಧಿಸಿವೆ. ಚಂದ್ರಚೂಡ್ ಚುನಾಯಿತ ಪ್ರತಿನಿಧಿಯಲ್ಲ ಮತ್ತು ಅವರು ಸ್ವತಃ ಕಾನೂನು ಆಗಿದ್ದಾರೆ ಎನ್ನುವುದು ಈ ಹೇಳಿಕೆಗಳ ಹಿಂದಿನ ನಿರೂಪಣೆಯಾಗಿದೆ ಎಂದು ಟ್ವಿಟರ್ ನಲ್ಲಿ ಹೇಳಿರುವ ಪಾಲ್, ಸಿಜೆಐ ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯವನ್ನೂ ನಿಯಂತ್ರಣ ಅಗತ್ಯವಿರುವ ವಿಷಯವನ್ನಾಗಿ ನೋಡಲಾಗುತ್ತಿದೆ ಎಂದಿದ್ದಾರೆ.

ಜ.7 ಮತ್ತು ಎ.20ರ ನಡುವಿನ ಟ್ವಿಟರ್ ಚಟುವಟಿಕೆಯನ್ನು ಪರಿಶೀಲಿಸಿದಾಗ ಇಸ್ಕಾನ್ ನ ವಕ್ತಾರ ರಾಧಾರಮಣ ದಾಸ್, ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿರುವ ರಾಮಪ್ರಸಾದ್ ಎಂಬ ಹೆಸರಿನ ಖಾತೆ ಮತ್ತು ಬಲಪಂಥೀಯ ವಿಚಾರಧಾರೆಗಳನ್ನು ಹರಡುವ ಮತ್ತು ಸುಳ್ಳುಸುದ್ದಿಗಳಿಗೆ ಕುಖ್ಯಾತಿಯಾಗಿರುವ "OpIndia"ದಲ್ಲಿ ನಿರೂಪಕ ಮತ್ತು ಅಂಕಣಕಾರ ಆಗಿರುವ ಅಭಿಜಿತ ಅಯ್ಯರ್-ಮಿತ್ರಾ ಆನ್ಲೈನ್ನಲ್ಲಿ ಚಂದ್ರಚೂಡ್ ಕುರಿತು ನಿರೂಪಣೆಯ ಮೇಲೆ ಪ್ರಭಾವ ಬೀರುತ್ತಿರುವ ಪ್ರಮುಖ ಖಾತೆಗಳಾಗಿವೆ ಎನ್ನುವುದು ಕಂಡು ಬಂದಿದೆ ಎಂದು ಅಗರವಾಲ್ ಮತ್ತು ಪಾಲ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶರ ಕುರಿತು ಸಂದೇಶಗಳ ಟೈಮ್ಲೈನ್ನ ಅಧ್ಯಯನ ನಡೆಸಿರುವ ಸಂಶೋಧಕರು, ನ್ಯಾಯಾಲಯದಲ್ಲಿ ಪ್ರಮುಖ ಬೆಳವಣಿಗೆಗಳ ಸಂದರ್ಭದಲ್ಲಿ ಇಂತಹ  ಸಂದೇಶಗಳು ಉತ್ತುಂಗಕ್ಕೇರಿದ್ದವು ಎನ್ನುವುದನ್ನು ಬೆಟ್ಟು ಮಾಡಿದ್ದಾರೆ.

ಚಂದ್ರಚೂಡ್ ಹಿಂದು ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆ ಎಂಬ ಆರೋಪ ಅವರು ಟ್ರೋಲ್ ಆಗುತ್ತಿರುವುದಕ್ಕೆ ಕಾರಣಗಳಲ್ಲಿ ಒಂದಾಗಿದೆ. ಹಲವಾರು ರೀತಿಗಳಲ್ಲಿ ಅವರನ್ನು ಹಿಂದು ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ಹಿಂದು ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಅವರ ತೀರ್ಪುಗಳ ಮೇಲೆ ನೇರ ದಾಳಿಗಳನ್ನು ನಡೆಸುವುದು ಅಥವಾ ಉದಾರವಾದಿ/ಪ್ರತಿಪಕ್ಷಗಳಿಂದ ಅವರಿಗೆ ಬೆಂಬಲವನ್ನು ಅವರು ಹಿಂದು ವಿರೋಧಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯವಾಗಿದೆ ಎಂದು ಬಿಂಬಿಸುವುದು ಎರಡು ಅತ್ಯಂತ ಸಾಮಾನ್ಯ ವಿಧಾನಗಳಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಕೃಪೆ: scroll.in

Similar News