ಪಿಸಿಬಿ ಮನವೊಲಿಕೆಗೆ ಲಾಹೋರ್‌ಗೆ ಬಂದಿರುವ ಐಸಿಸಿ ಮುಖ್ಯಸ್ಥರು

Update: 2023-05-31 17:48 GMT

ಲಾಹೋರ್: ಏಕದಿನ ಕ್ರಿಕೆಟ್ ವಿಶ್ವಕಪ್‌ನ ತನ್ನ ಪಂದ್ಯಗಳಿಗೆ ವಿಶೇಷ ಮಾದರಿಯೊಂದನ್ನು ರೂಪಿಸುವಂತೆ ಒತ್ತಾಯಿಸಬಾರದು ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮನವೊಲಿಸುವುದಕ್ಕಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬುಧವಾರ ಲಾಹೋರ್‌ಗೆ ಭೇಟಿ ನೀಡಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಪಾಲ್ಗೊಳ್ಳುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಭರವಸೆಗಳನ್ನು ಪಡೆಯುವ ನಿರ್ದಿಷ್ಟ ಉದ್ದೇಶದಿಂದ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್‌ಲೇ ಮತ್ತು ಸಿಇಒ ಜೆಫ್ ಆ್ಯಲರ್ಡಿಸ್ ಲಾಹೋರ್‌ಗೆ ಬಂದಿದ್ದಾರೆ ಎನ್ನುವುದನ್ನು ಪಿಸಿಬಿಯ ಮೂಲಗಳು ಖಚಿತಪಡಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ವಿಶ್ವಕಪ್‌ಗೆ ಮುನ್ನ ನಡೆಯುವ ಏಶ್ಯ ಕಪ್‌ನಲ್ಲಿ ಆಡಲು ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಬರದಿದ್ದರೆ, ತನ್ನ ತಂಡವೂ ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಹೋಗುವುದಿಲ್ಲ ಎಂಬುದಾಗಿ ಪಿಸಿಬಿ ಅಧ್ಯಕ್ಷ ನಜಾಮ್ ಸೇಠಿ ಹೇಳಿಕೆ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

‘‘ವಿಶೇಷ ಮಾದರಿಯೊಂದನ್ನು ರೂಪಿಸುವಂತೆ ನಜಾಮ್ ಸೇಠಿ ಒತ್ತಾಯಿಸುತ್ತಿರುವುದು ಐಸಿಸಿ ಮತ್ತು ವಿಶ್ವಕಪ್ ಆತಿಥೇಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಳವಳಕ್ಕೆ ಕಾರಣವಾಗಿದೆ. ವಿಶೇಷ ಮಾದರಿಯೊಂದನ್ನು ರೂಪಿಸುವಂತೆ ಅವರು ಒತ್ತಾಯಿಸುತ್ತಿರುವುದು ಏಶ್ಯ ಕಪ್‌ಗಾಗಿಯಾದರೂ, ಒಮ್ಮೆ ಇದಕ್ಕೆ ಒಪ್ಪಿಗೆ ನೀಡಿದರೆ, ಬಳಿಕ ನಡೆಯಲಿರುವ ವಿಶ್ವಕಪ್‌ಗೂ ಇದೇ ಮಾದರಿಯನ್ನು ಜಾರಿಗೊಳಿಸುವಂತೆ ಪಿಸಿಬಿಯು ಐಸಿಸಿಯನ್ನು ಒತ್ತಾಯಿಸಬಹುದು ಎಂಬ ಕಳವಳವನ್ನು ಐಸಿಸಿ ಹೊಂದಿದೆ’’ ಎಂದು ಮೂಲಗಳು ಹೇಳಿವೆ.

ವಿಶೇಷ ಮಾದರಿ ಎಂದರೆ ತಟಸ್ಥ ಸ್ಥಳಗಳಲ್ಲಿ ಆಡಲು ತಂಡಗಳಿಗೆ ಅವಕಾಶ ನೀಡುವುದು.

ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಅನುಮೋದನೆ ನೀಡದಿದ್ದರೆ ಅಥವಾ ಭದ್ರತಾ ಭೀತಿ ಇದ್ದರೆ, ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳವೊಂದರಲ್ಲಿ ಏರ್ಪಡಿಸುವಂತೆ ಪಿಸಿಬಿಯು ಐಸಿಸಿಯನ್ನು ಕೇಳಬಹುದು ಎಂಬ ಸೂಚನೆಯನ್ನು ಸೇಠಿ ಈಗಾಗಲೇ ನೀಡಿದ್ದಾರೆ.

Similar News