ಜಲಸಂಪನ್ಮೂಲ ಇಲಾಖೆಯಲ್ಲಿ ಶೇ.40 ಕಮಿಷನ್ ಆರೋಪ: ಇಲಾಖೆಯ ಕಾರ್ಯದರ್ಶಿಯನ್ನು ಇನ್ನೂ ಬದಲಿಸದ ನೂತನ ಸರಕಾರ

Update: 2023-06-01 03:10 GMT

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಶೇ.೪೦ ಕಮಿಷನ್ ವ್ಯವಹಾರ ನಡೆದಿತ್ತು ಎಂಬ ಆರೋಪವನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಗುತ್ತಿಗೆದಾರರಿಂದ ಶೇ.೪೦ರಷ್ಟು ಪರ್ಸೆಂಟೇಜ್ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ ಆರೋಪ ಅದು. ಆದರೆ, ಅಧಿಕಾರಕ್ಕೇರಿ ಹಲವು ದಿನಗಳಾದರೂ ಜಲಸಂಪನ್ಮೂಲ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ಕಾಂಗ್ರೆಸ್ ಸರಕಾರ ಬದಲಿಸಿಲ್ಲ.

ಹಿಂದಿನ ಬಿಜೆಪಿ ಸರಕಾರದಲ್ಲಿನ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್ ಗೋಯಲ್ ಮತ್ತು ಕಂದಾಯ ಇಲಾಖೆಯ  ಕಾರ್ಯದರ್ಶಿ ಎನ್.ಜಯರಾಮ್ ಅವರನ್ನು ಮುಖ್ಯಮಂತ್ರಿಯ ಕಚೇರಿಗೆ ನೇಮಿಸಿಕೊಂಡಿರುವ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆ ಯಲ್ಲಿಯೂ ರಾಕೇಶ್ ಸಿಂಗ್ ಅವರು ಮುಂದುವರಿದಿರುವುದು ಅಧಿಕಾರಿಶಾಹಿಯೊಳಗೆ  ಚರ್ಚೆಗೆ ಕಾರಣವಾಗಿದೆ.

ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು ‘ಈ ಹಿಂದೆ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ, ಲೋಪ ದೋಷಗಳನ್ನು ಪತ್ತೆ ಮಾಡಲು ಪ್ರತ್ಯೇಕ ಸಲಹಾ ಸಮಿತಿ ರಚಿಸಲಾಗುತ್ತಿದ್ದು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೇ ನೀರಾವರಿ ಯೋಜನೆಗಳನ್ನು ಮುಗಿಸಬೇಕು’ ಎಂದು ಸೂಚಿಸಿದರು. ಈ ವೇಳೆಯಲ್ಲಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಕೂಡ ಹಾಜರಿದ್ದದ್ದು ವಿಶೇಷ.

ಉಪ ಮುಖ್ಯಮಂತ್ರಿಯೂ ಆಗಿರುವ  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ನಡೆಸಿದ್ದ ಸಭೆಯಲ್ಲಿ ರಾಕೇಶ್‌ಸಿಂಗ್ ಅವರೇ ಇಲಾಖೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನೂ ಒದಗಿಸಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣದ ಹಾಗೂ ಶೇ.೪೦ರಷ್ಟು ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ವಿಚಾರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಸೂಚಿಸಿದ್ದರು. ರವಿಕುಮಾರ್ ಅವರು ಜಲಸಂಪನ್ಮೂಲ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ಗೆ ತನಿಖೆಗೆ ಸೂಚಿಸಿದ್ದರು.

ಯಾವ ನಿಗಮಗಳ ವಿರುದ್ಧ ಆರೋಪಿಸಲಾಗಿತ್ತೋ ಆ  ನೀರಾವರಿ ನಿಗಮಗಳು ನೀಡಿದ್ದ ಸಮಜಾಯಿಷಿಯನ್ನೇ ಪುರಸ್ಕರಿಸಿ  ರಾಕೇಶ್ ಸಿಂಗ್ ಅವರು  ಕ್ಲೀನ್ ಚಿಟ್ ಕೊಟ್ಟಿದ್ದರು.

ಹತ್ತು ಕೋಟಿ ರೂ. ಅನುದಾನ ಮೀರಿದ ಎಲ್ಲ ಕಾಮಗಾರಿಗಳು, ಟೆಂಡರ್ ಪ್ರಕ್ರಿಯೆ ಅಥವಾ ಬಿಲ್ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕುರಿತಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ತಮ್ಮ ಹಂತದಲ್ಲೇ ಕ್ಲೀನ್ ಚಿಟ್ ಕೊಟ್ಟುಕೊಂಡಿದ್ದವು. ಅಲ್ಲದೆ ಶೇ.೪೦ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಕುರಿತು ಒಂದೇ ಒಂದು ದೂರು ಬಂದಿಲ್ಲ ಎಂದು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಲಸಂಪನ್ಮೂಲ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ ವರದಿ ನೀಡಿದ್ದವು.

ಈ ಸಂಬಂಧ ರಾಕೇಶ್‌ಸಿಂಗ್ ಅಧಿಕಾರಿಗಳೊಂದಿಗೆ 2021ರ ನವೆಂಬರ್ 19 ರಂದು ಎಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ವಿಶೇಷವೆಂದರೆ ಈ ಪ್ರಕರಣವು ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು.  ಆದರೆ  ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಬಿಲ್ ಪಾವತಿ ಹಂತ, ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ತಮ್ಮ ಹಂತದಲ್ಲಿಯೇ ಕ್ಲೀನ್ ಚಿಟ್ ನೀಡಿಕೊಂಡಿತ್ತು.

Similar News