100 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಿದ ರಾಜಸ್ಥಾನ ಸರ್ಕಾರ

Update: 2023-06-01 07:31 GMT

ಜೈಪುರ್: ಈಗಾಗಲೇ ವರ್ಷಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ರೂ 500ಕ್ಕೆ ನಾಗರಿಕರಿಗೆ ಒದಗಿಸುತ್ತಿರುವ ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬುಧವಾರ ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದೆ.

ರಾಜ್ಯದ ಎಲ್ಲಾ ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ಗ್ರಾಹಕರಿಗೆ ಪ್ರತಿ ತಿಂಗಳು 100 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಬುಧವಾರ ಮುಖ್ಯಮಂತ್ರಿ ಗೆಹ್ಲೋಟ್‌ ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ 200 ಯುನಿಟ್‌ವರೆಗೆ ವಿದ್ಯುತ್‌ ಬಳಸುವ ಗ್ರಾಹಕರಿಗೆ ಖಾಯಂ ಶುಲ್ಕ, ಇಂಧನ ಸರ್ಚಾರ್ಜ್‌ ಮತ್ತು ಇತರ ಶುಲ್ಕಗಳನ್ನು ಮನ್ನಾಗೊಳಿಸುವುದಾಗಿಯೂ ಗೆಹ್ಲೋಟ್‌ ಹೇಳಿದ್ದಾರೆ.

ಗೆಹ್ಲೋಟ್‌ ಅವರು ನೀಡಿದ ಮಾಹಿತಿ ಪ್ರಕಾರ 100 ಯುನಿಟ್‌ ತನಕ ಬಳಸುವ ವಿದ್ಯುತ್‌ ಗ್ರಾಹಕರಿಗೆ ಯಾವುದೇ ಬಿಲ್‌ ಪಾವತಿಸುವ ಅಗತ್ಯವಿಲ್ಲದೇ ಇದ್ದರೆ 200 ಯುನಿಟ್‌ ವರೆಗೆ ಬಳಸುವವರಿಗೆ ಈಗಿನ ಮೊತ್ತವಾದ ರೂ. 1610 ಬದಲು ರೂ 503 ಪಾವತಿಸಬೇಕಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಅಭಿಪ್ರಾಯದ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನಕ್ಕೆ ಆಗಮಿಸಿ ಅಜ್ಮೀರ್‌ನಲ್ಲಿ ಪಕ್ಷದ ಪ್ರಚಾರವನ್ನು ಆರಂಭಿಸಿದ ದಿನದಂದೇ ರಾಜ್ಯ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ.

Similar News