ಮಣಿಪುರದಲ್ಲಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸದವರ ವಿರುದ್ಧ ಕಠಿಣ ಕ್ರಮ: ಅಮಿತ್ ಶಾ

Update: 2023-06-01 07:44 GMT

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸುವ ಯೋಜನೆಯ ಭಾಗವಾಗಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲಾಗುವುದು ಹಾಗೂ  ಶಾಂತಿ ಸಮಿತಿಯನ್ನು ರಚಿಸುವುದಾಗಿ ಶಾ ಘೋಷಿಸಿದರು.

ಮಣಿಪುರದ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಕೇಂದ್ರ ಸರಕಾರವು ತನ್ನ ನಿಲುವನ್ನು ಮೊದಲೇ ಸ್ಪಷ್ಟಪಡಿಸಿತ್ತು ಹಾಗೂ  ಈ ವಿಷಯದ ಬಗ್ಗೆ ಇಂದು ಹೇಳಿಕೆ ನೀಡಲು ಹಾಗೂ ಅದನ್ನು ಸಂವೇದನಾಶೀಲಗೊಳಿಸಲು ಬಯಸುವುದಿಲ್ಲ ಎಂದು ಶಾ ಪುನರುಚ್ಚರಿಸಿದರು.

ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಯು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲಿದೆ ಎಂದು ಈಶಾನ್ಯ ರಾಜ್ಯಕ್ಕೆ ತಮ್ಮ ನಾಲ್ಕು ದಿನಗಳ ಭೇಟಿಯ ಸಂದರ್ಭದಲ್ಲಿ ಸರಣಿ ಸಭೆಗಳ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅಮಿತ್ ಶಾ ಹೇಳಿದರು.

ರಾಜ್ಯಪಾಲರು ಹಾಗೂ  ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹಾಗೂ  ನಾಗರಿಕ ಸಮಾಜದ ಸದಸ್ಯರ ಅಡಿಯಲ್ಲಿ ಶಾಂತಿ ಸಮಿತಿಯನ್ನು ರಚಿಸಲಾಗುವುದು.

Similar News