ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರ ನಿಭಾಯಿಸಿದ ರೀತಿಗೆ ಹರ್ಯಾಣ ಬಿಜೆಪಿ ಘಟಕ ಅಸಮಾಧಾನ

Update: 2023-06-01 08:51 GMT

ಹೊಸದಿಲ್ಲಿ: ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದಂತಹ  ಗಂಭೀರ ಆರೋಪಗಳನ್ನು ಹೊರಿಸಿ ಕುಸ್ತಿಪಟುಗಳ ಗುಂಪು  ನಡೆಸುತ್ತಿರುವ ಪ್ರತಿಭಟನೆಯನ್ನು  ಕೇಂದ್ರ ಸರಕಾರ ನಿಭಾಯಿಸಿದ ರೀತಿಗೆ  ಹರ್ಯಾಣದ ಬಿಜೆಪಿ ಘಟಕದಲ್ಲಿ ಅಸಮಾಧಾನದ ಭಾವನೆ ಬೆಳೆಸುತ್ತಿದೆ ಎಂದು ವರದಿಯಾಗಿದೆ.

ಬಿಜೆಪಿ ಸಂಸದ ಹಾಗೂ  ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳನ್ನು ಪರಿಹರಿಸಲು ಸರಕಾರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ಹರ್ಯಾಣ ಮೂಲದ ದೇಶದ ಮೂವರು ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ  ಬಜರಂಗ್ ಪೂನಿಯಾ  ಪ್ರತಿಭಟನೆಯನ್ನು ಮುನ್ನಡೆಸಿದ್ದಾರೆ

ಮುಂದಿನ ವರ್ಷ ಲೋಕಸಭೆ ಹಾಗೂ ಹರ್ಯಾಣ  ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕುಸ್ತಿಪಟುಗಳ ಈ ಅಭಿಯಾನವು ಬಿಜೆಪಿಯಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.  ಕುಸ್ತಿಪಟುಗಳ ಪ್ರತಿಭಟನೆಯು ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಹಾಗೂ ಹರ್ಯಾಣದ  ಗೃಹ ಸಚಿವ ಅನಿಲ್ ವಿಜ್ ಸೇರಿದಂತೆ ರಾಜ್ಯದ ಕೆಲವು ನಾಯಕರಿಂದ ಅನಿರೀಕ್ಷಿತ ಬೆಂಬಲವನ್ನು ಗಳಿಸಿದೆ.

"ನಮ್ಮ ಕುಸ್ತಿಪಟುಗಳ ನೋವು ಮತ್ತು ಅಸಹಾಯಕತೆ ನನಗೆ ಅರ್ಥವಾಗುತ್ತಿದೆ. ಅವರ ಜೀವಮಾನದ ಕಠಿಣ ಪರಿಶ್ರಮದ ಮೂಲಕ ಒಲಿಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ಗಳು, ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿರುವ  ಪದಕಗಳನ್ನು ಪವಿತ್ರ ಗಂಗೆಯಲ್ಲಿ ಎಸೆಯುವ ಹಂತಕ್ಕೆ ಅವರು ತಲುಪಿದ್ದಾರೆ.  ಇದು  ಸಂಪೂರ್ಣವಾಗಿ ಹೃದಯವಿದ್ರಾವಕ" ಎಂದು ಸಿಂಗ್ ಈ ವಾರ ಟ್ವೀಟ್ ಮಾಡಿದ್ದಾರೆ.

ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಆಟಗಾರರ ಪ್ರಕರಣವನ್ನು ಉನ್ನತ ಮಟ್ಟದಲ್ಲಿ  ಕೈಗೆತ್ತಿಕೊಳ್ಳಲಾಗಿದೆ. ನಾನೇ ಕ್ರೀಡಾ ಇಲಾಖೆಯ ಸಚಿವನಾಗಿದ್ದೇನೆ. ನಾನು ಸಂಪೂರ್ಣವಾಗಿ ಆಟಗಾರರೊಂದಿಗೆ ಇದ್ದೇನೆ.  ಅಗತ್ಯವಿದ್ದರೆ ಸರಕಾರದೊಂದಿಗೆ ಮಾತನಾಡಲು ಸಿದ್ದನಿದ್ದೇನೆ ಎಂದು   ವಿಜ್ ಕಳೆದ ತಿಂಗಳು ಹೇಳಿದ್ದರು.

ಕುಸ್ತಿಪಟುಗಳಿಗೆ ಹೆಚ್ಚುತ್ತಿರುವ ಬೆಂಬಲದ ಹೊರತಾಗಿಯೂ ಹರ್ಯಾಣ ಬಿಜೆಪಿ ನಾಯಕತ್ವವು ಈ ವಿಷಯದ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ತನ್ನ  ನಿಲುವು ತಳೆಯಬೇಕಿದೆ.

 ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್   ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ, "ಈ ವಿಚಾರ ಹರ್ಯಾಣಕ್ಕೆ ಸಂಬಂಧಿಸಿಲ್ಲ.  ಆದರೆ ಆಟಗಾರರ ತಂಡಗಳು ಹಾಗೂ  ಕೇಂದ್ರ ಸರಕಾರಕ್ಕೆ ಸಂಬಂಧಿಸಿದೆ''ಎಂದು ಹೇಳಿದ್ದಾರೆ.

Similar News