ಕೇಜ್ರಿವಾಲ್ ಕಠೋರ ಹಿಂದುತ್ವ ಪಾಲಿಸುತ್ತಾರೆ: ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಬೆಂಬಲಿಸಲು ನಿರಾಕರಿಸಿದ ಉವೈಸಿ

Update: 2023-06-01 11:12 GMT

ಹೈದರಾಬಾದ್: ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕಠೋರ ಹಿಂದುತ್ವ ಪಾಲಿಸುವುದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆ ವಿರುದ್ಧ ಅವರನ್ನು ಬೆಂಬಲಿಸುವುದಿಲ್ಲ ಎಂದು ಬುಧವಾರ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸ್ಪಷ್ಟಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಿರೋಧ ಪಕ್ಷಗಳ ಬೆಂಬಲ ಕೋರುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉವೈಸಿ, "ಕೇಜ್ರಿವಾಲ್ ಏಕೆ ವಿಧಿ 370ರ ವಿಚಾರದಲ್ಲಿ ಬಿಜೆಪಿಗೆ ಬೆಂಬಲಿಸಿದರು? ಅವರೇಕೆ ಈಗ ಅಳುತ್ತಿದ್ದಾರೆ? ನಾನು ಕೇಜ್ರಿವಾಲ್ ರನ್ನು ಬೆಂಬಲಿಸುವುದಿಲ್ಲ. ಯಾಕೆಂದರೆ ಅವರು ಅವರು ಕೇವಲ ಮೃದು ಹಿಂದುತ್ವವಾದಿಯಲ್ಲ; ಬದಲಿಗೆ, ಕಠೋರ ಹಿಂದುತ್ವವನ್ನು ಪಾಲಿಸುತ್ತಾರೆ" ಎಂದು ಕಿಡಿ ಕಾರಿದ್ದಾರೆ‌.

ಆಗಸ್ಟ್ 5, 2019ರಲ್ಲಿ ಕೇಂದ್ರ ಸರ್ಕಾರವು ವಿಧಿ 370 ಅನ್ನು ರದ್ದುಪಡಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದರು. ಅವರು, "ಜಮ್ಮು ಮತ್ತು ಕಾಶ್ಮೀರದ ಕುರಿತು ಸರ್ಕಾರದ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ಧಿ ತರಲಿದೆ ಎಂಬ ನಂಬಿಕೆಯಿದೆ" ಎಂದು ಟ್ವೀಟ್ ಮಾಡಿದ್ದರು ಎಂದು ಉವೈಸಿ ಹೇಳಿದ್ದಾರೆ.

ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ವಿರುದ್ಧ ತನ್ನನ್ನು ಬೆಂಬಲಿಸುವಂತೆ ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಕೆ.ಚಂದ್ರಶೇಖರ್ ರಾವ್, ತೇಜಸ್ವಿ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಅವರು ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರನ್ನೂ ಭೇಟಿ ಮಾಡಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಎಂ‌.ಕೆ.ಸ್ಟಾಲಿನ್ ಹಾಗೂ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನೂ ಶೀಘ್ರ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

Similar News