ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇತ್ತೀಚಿನವರೆಗೆ ಮಣಿಪುರ ಬಂದ್‌, ಕರ್ಫ್ಯೂಗಳಿಂದ ಮುಕ್ತವಾಗಿತ್ತು: ಅಮಿತ್‌ ಶಾ

Update: 2023-06-01 11:24 GMT

ಇಂಫಾಲ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಭುಗಿಲೆದ್ದ ಘರ್ಷಣೆಗಳ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. 

ಸುಮಾರು ಆರು ವರ್ಷಗಳ ಹಿಂದೆ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಇತ್ತೀಚಿಗೆ ನಡೆದ ಜನಾಂಗೀಯ ಘರ್ಷಣೆಯ ತನಕ ರಾಜ್ಯದಲ್ಲಿ ಯಾವುದೇ ಬಂದ್‌ಗಳು, ಕರ್ಫ್ಯೂಗಳು ನಡೆದಿರಲಿಲ್ಲ. ಸದ್ಯ ನಡೆಯುತ್ತಿರುವ ಗಲಭೆಯು ತಪ್ಪು ತಿಳುವಳಿಕೆ ಮತ್ತು ಅವಸರದ ತೀರ್ಮಾನದಿಂದ ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿರುವುದಾಗಿ PTI ವರದಿ ಮಾಡಿದೆ. 

ಮಣಿಪುರದ ರಾಜ್ಯಪಾಲರಾದ ಅನುಸೂಯ ಉಯಿಕೆ ಅವರ ನೇತೃತ್ವದಲ್ಲಿ ಶಾಂತಿ ಸಮಿತಿಯನ್ನು ರಚಿಸಲಾಗುವುದು, ಈ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕುಕಿ ಮತ್ತು ಮೇಟಿ ಸಮುದಾಯಗಳು ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಮಾತುಕತೆಯೊಂದೇ ಪರಿಹಾರ ಎಂದು ಹೇಳಿದ ಶಾ, ‘‘ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಮತ್ತು ಶಾಂತಿ ಸಮಿತಿಯನ್ನು ರಚಿಸುತ್ತೇವೆ,’’ ಎಂದು ಹೇಳಿದರು.

ಮಣಿಪುರದ ಹಿಂಸಾಚಾರದ ಹಿಂದಿನ ಪಿತೂರಿಯನ್ನು ತನಿಖೆ ಮಾಡಲು ಸಿಬಿಐ ತನಿಖೆಯನ್ನು ಆರಂಭಿಸಲಾಗುವುದು ಎಂದು ಗೃಹ ಸಚಿವರು ಘೋಷಿಸಿದ್ದಾರೆ.

Similar News