ಅಮೆರಿಕಾದೊಂದಿಗೆ ತಮ್ಮ ಬಗ್ಗೆ ಒಳ್ಳೆ ಮಾತುಗಳನ್ನಾಡುವಂತೆ ಗುಜರಾತ್‌ ಗಲಭೆ ಬಳಿಕ ಮೋದಿ ಕೋರಿದ್ದರು: ಸ್ವಾಮಿ ಟ್ವೀಟ್‌

Update: 2023-06-01 12:53 GMT

ಹೊಸದಿಲ್ಲಿ: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಗಳ ನಂತರ ತಮ್ಮ ಬಗ್ಗೆ ಕೆಲ ಒಳ್ಳೆ ಮಾತುಗಳನ್ನು ಅಮೆರಿಕಾ ಸರಕಾರದ ಬಳಿ ಹೇಳುವಂತೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮಲ್ಲಿ ಕೇಳಿಕೊಂಡಿದ್ದರು ಎಂದು ಬುಧವಾರ ಟ್ವೀಟ್‌ ಮೂಲಕ ಬಿಜೆಪಿ ನಾಯಕ, ಮಾಜಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. ಆಗ ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಕದವನ್ನು ಅಮೆರಿಕಾ ತಟ್ಟಬಹುದೆಂಬ ಭೀತಿಯಿಂದ ಮೋದಿ ಹೀಗೆ ಹೇಳಿದ್ದರು ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.

ತಾವು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಭೇಟಿಯಾದ ಸಂದರ್ಭದ ಫೋಟೋ ಶೇರ್‌ ಮಾಡಿದ ಸ್ವಾಮಿ “ಮೋದಿ ಮರೆತಿದ್ದರೂ, ಅಮೆರಿಕಾ ಸರಕಾರ ಐಸಿಸಿ ಕದ ತಟ್ಟಬಹುದೆಂಬ ಭೀತಿಯಿಂದ ಅಲ್ಲಿನ ಸರಕಾರದೊಂದಿಗೆ ತಮ್ಮ ಕುರಿತು ಒಳ್ಳೆಯ ಮಾತುಗಳನ್ನಾಡುವಂತೆ ಅವರು ಕೇಳಿಕೊಂಡಿದ್ದರೆಂಬುದನ್ನು ನಾನು ಮರೆತಿಲ್ಲ,” ಎಂದು ಸ್ವಾಮಿ ಬರೆದಿದ್ದಾರೆ.

ಸ್ವಾಮಿ ಅವರ ಈ ಟ್ವೀಟ್‌ ಹಲವರ ಗಮನ ಸೆಳೆದಿದ್ದು ಅದರ ಮರ್ಮವೇನು ಎಂದು ಹಲವರು ಚರ್ಚಿಸಲಾರಂಭಿಸಿದ್ದಾರೆ.

2005 ರಲ್ಲಿ ಅಮೆರಿಕಾ ಸರ್ಕಾರವು ಮೋದಿ ಅವರ ಟೂರಿಸ್ಟ್‌/ಬಿಸಿನೆಸ್‌ ವೀಸಾವನ್ನು ಅಮೆರಿಕಾದ ಇಮಿಗ್ರೇಶನ್‌ ಮತ್ತು ನ್ಯಾಷನಾಲಿಟಿ ಕಾಯಿದೆಯಡಿ ವಜಾಗೊಳಿಸಿತ್ತು. ಈ ವೀಸಾ ನಿಷೇಧ ಒಂದು ದಶಕಗಳ ಕಾಲ ಮುಂದುವರಿದಿತ್ತು. ನಂತರ 2014ರಲ್ಲಿ ಆಗಿನ ಒಬಾಮಾ ಆಡಳಿತ ಈ ವೀಸಾ ನಿಷೇಧವನ್ನು ವಾಪಸ್‌ ಪಡೆದಿತ್ತು.

Similar News