ಕಲಾವಿದರು ಅಧ್ಯಯನಶೀಲರಾಗಬೇಕು: ಡಾ.ಜಿ.ಎಲ್.ಹೆಗಡೆ

Update: 2023-06-01 14:32 GMT

ಉಡುಪಿ: ಕಲಾವಿದರಾಗಬೇಕಾದರೆ ಯಕ್ಷಗಾನದ ಸರ್ವಾಂಗೀಣ ಅಭಿವೃದ್ಧಿಗೆ ನಿತ್ಯ ಯತ್ನ ಮಾಡಬೇಕು. ಕಲಾವಿ ದರು ಅಧ್ಯಯನಶೀಲರಾಗಬೇಕು. ಕಲೆಯನ್ನು ಉದ್ಧಾರ ಮಾಡಬೇಕಾದರೆ ಕಲಾವಿದರು ತಮ್ಮ ಜವಾಬ್ದಾರಿ ಯನ್ನು ನಿಬಾಯಿಸಬೇಕೆಂದು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗ ವತಿಯಿಂದ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಯಕ್ಷನಿಧಿ ಕಲಾವಿದರ 2023ರ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ಆರಾಧನಾ ಕಲೆಯಾಗಿದ್ದ ಯಕ್ಷಗಾನ ವೃತ್ತಿ ಕಲೆಯಾಗಿ ಸಾವಿರಾರು ಮಂದಿಗೆ ಅನ್ನ ಕೊಡುತ್ತಿದೆ. ಇಂದು ಸರಕಾರ ಎಲ್ಲವನ್ನು ಉಚಿತವಾಗಿ ಕೊಡುತ್ತಿದೆ. ಅದೇ ರೀತಿ ಯಕ್ಷಗಾನಕ್ಕೂ ಉಚಿತವಾಗಿ ಕೊಡುವಂತೆ ಕಲಾವಿದರು ಸರಕಾರವನ್ನು ಕೇಳಬೇಕು. ಯಕ್ಷಗಾನ ಇಡೀ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಪ್ರಚಾರ ಮಾಡುವ ಕಲೆಯಾಗಿದೆ. ಇದನ್ನು ಉಳಿಸಲು ಕೇವಲ ಕುಣಿದರೆ ಮಾತ್ರ ಸಾಕಾಗುವುದಿಲ್ಲ. ಅಧ್ಯಯನ ಮಾಡಿ ಅರ್ಥ ಹೇಳಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ವಹಿಸಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ, ಕೆನರಾ ಬಸ್ ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್,  ಉಚ್ಚಿಲ ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು.

ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಯಕ್ಷನಿಧಿಗೆ ದೊಡ್ಡ ಮೊತ್ತ ನೀಡಿದ ಕಲಾವಿದ ನೀಲ್ಕೋಡು ಶಂಕರ ಹೆಗಡೆ ಅವರನ್ನು ಗೌರವಿಸಲಾಯಿತು. 17 ಮಂದಿ ಕಲಾವಿದರಿಗೆ ಗೃಹ ನಿರ್ಮಾಣ ಉಡುಗೊರೆಯಾಗಿ ತಲಾ 10,000ರೂ. ದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವರದಿ ವರ್ಷದಲ್ಲಿ ಅಗಲಿದ 17 ಕಲಾವಿದರಿಗೆ ಶ್ರದ್ಧಾಂಜಲಿ ಅರ್ಪಿಸ ಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯ ದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ ವೇದಿಕೆಯ ನಿರ್ವಹಣೆಗೆ ಸಹಕರಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

ಯಕ್ಷಗಾನ ಸಮ್ಮೇಳನ ಮುಂದುವರೆಸಲು ಒತ್ತಡ

ಕಳೆದ ವರ್ಷ ಹಿಂದಿನ ಸರಕಾರ ನಡೆಸಿದ ಯಕ್ಷಗಾನ ಸಮ್ಮೇಳನವನ್ನು  ಮುಂದುವರೆಸುವಂತೆ ಕಲಾವಿದರು ಒತ್ತಡ ಹಾಕಬೇಕು. ಇದರ ಜವಾಬ್ದಾರಿ ಕಲಾವಿದರ ಮೇಲೆ ಇದೆ ಎಂದು ಡಾ.ಜಿ.ಎಲ್.ಹೆಗಡೆ ತಿಳಿಸಿದರು.

ನಮಗೆ ಯಾವುದೇ ಪಕ್ಷವೂ ಇಲ್ಲ. ನಮ್ಮದು ಯಕ್ಷಗಾನ ಪಕ್ಷ. ಎಲ್ಲ ಪಕ್ಷದವರು ಕೂಡ ನಮಗೆ ಬೇಕು. ಆರಿಸಿ ಬಂದ ಸರಕಾರ ನಮ್ಮ ಸರಕಾರ. ಅವರು ಕೆಲಸ ಮಾಡದಿದ್ದರೆ ಕೇಳುವ ಸಾಮರ್ಥ್ಯ ಯಕ್ಷಗಾನ ಕಲಾವಿದರಿಗೆ ಇದೆ. ಹಿಂದಿನ ಸರಕಾರ ಯಕ್ಷಗಾನ ಸಮ್ಮೇಳನಕ್ಕೆ 2ಕೋಟಿ ರೂ. ನೀಡಿದ್ದು, ಈ ಸರಕಾರ 5 ಕೋಟಿ ನೀಡುವಂತೆ ಕೇಳಬೇಕು ಎಂದರು.  

Similar News